ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರ ನಕಲಿ ಪದವಿ ಪ್ರಮಾಣಪತ್ರದ ತನಿಖೆ ಇನ್ನೂ ಪ್ರಗತಿಯಲ್ಲಿದೆ, ಆದರೆ ಎಎಪಿ ಪಕ್ಷದ ಮುಖಂಡ ಪದವಿ ಪ್ರಮಾಣಪತ್ರಗಳನ್ನು ಇಬ್ಬರು ಮಧ್ಯವರ್ತಿಗಳಿಂದ ಪಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಮೂಲಗಳನ್ನು ತಿಳಿಸಿರುವ 'ದ ಹಿಂದೂಸ್ತಾನ್ ಟೈಮ್ಸ್' ಪತ್ರಿಕೆ, ತನಿಖೆಯ ವೇಳೆಯಲ್ಲಿ ತೋಮರ್ ಅವರು ದೆಹಲಿ ಮತ್ತು ಮಂಗರ್ ನ ಇಬ್ಬರು ಮಧ್ಯವರ್ತಿಗಳಿಂದ ಬಿ ಎಸ್ ಸಿ ಮತ್ತು ಎಲ್ ಎಲ್ ಬಿ ಪದವಿಗಳನ್ನು ಪಡೆದಿರುವುದಾಗಿ ತನಿಖಾದಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿದೆ.
ತಾವು ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದರಿಂದ ಹಾಗು ಸಮಾಜದಲ್ಲಿ ಒಪ್ಪಿಗೆ ಪಡೆಯಲು ನಕಲಿ ಪದವಿಗೆ ಮೊರೆ ಹೋಗಿದ್ದಾಗಿ ತೋಮರ್ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ಬಿಹಾರದ ತಿಳಕಾ ಮಾಂಝಿ ಭಗಲಪುರ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ ಪದವಿಯನ್ನೂ ಅವಧ್ ವಿಶ್ವವಿದ್ಯಾಲಯದಿಂದ ಬಿ ಎಸ್ ಸಿ ಪದವಿಯನ್ನು ಪಡೆದಿದ್ದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಈಗ ಈ ಪದವಿ ಪ್ರಮಾಣ ಪತ್ರ ಒದಗಿಸಿದ ಮಧ್ಯವರ್ತಿಗಳ ಹೆಸರನ್ನು ಕೂಡ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ತೋಮರ್ ಅವರ ವಕೀಲ ಸಹೋದರ ಈ ಮಧ್ಯವರ್ತಿಗಳನ್ನು ಪರಿಚಯ ಮಾಡಿಕೊಟ್ಟದ್ದಾಗಿ ಕೂಡ ಒಪ್ಪಿಕೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಈ ಮಧ್ಯೆ ಸೆಷನ್ಸ್ ನ್ಯಾಯಾಲಯ ತೋಮರ್ ಅವರ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ತಿಳಿಸಿದ್ದು, ತಮ್ಮ ಪೊಲೀಸ್ ಬಂಧನದ ಅವಧಿ ಮುಗಿದ ನಂತರ ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ತೋಮರ್ ಅವರನ್ನು ಸೋಮವಾರ ೪ ದಿನಗಳ ಪೋಲಿಸ್ ಬಂಧನಕ್ಕೆ ಒಳಪಡಿಸಲಾಗಿತ್ತು.