ಪ್ರಧಾನ ಸುದ್ದಿ

ಹತ್ತು ಅಣೆಕಟ್ಟೆಗಳ ಅಭಿವೃದ್ಧಿ

Lingaraj Badiger

ಬೆಂಗಳೂರು: ರಾಜ್ಯ ಸರ್ಕಾರ ವಿಶ್ವಬ್ಯಾಂಕ್ ನೆರವಿನೊಂದಿಗೆ 10 ಅಣೆಕಟ್ಟೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ಕೇಂದ್ರ ಜಲ ಆಯೋಗಕ್ಕೆ 175 ಕೋಟಿಗಳ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದಾರೆ.

ರಾಜ್ಯದ ಅಣೆಕಟ್ಟೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದಕ್ಕಾಗಿ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟೆಗಳ ಪುನಶ್ಚೇತನ ಮತ್ತು ಆಧುನೀಕರಣಕ್ಕೆ 186 ಕೋಟಿ ರುಪಾಯಿಗಳ ಅನುದಾನ ಪಡೆದಿದ್ದು, ಸದ್ಯದಲ್ಲೇ ಕಮಗಾರಿ ಆರಂಭಿಸಲಿದೆ. ಇದರೊಂದಿಗೆ 175 ಕೋಟಿ ರುಪಾಯಿಗಳ ಅಂದಾಜು ವೆಚ್ಚದಲ್ಲಿ ಇನ್ನೂ 10 ಅಣೆಕಟ್ಟೆಗಳನ್ನು ಆಧುನೀಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 116 ಅಣೆಕಟ್ಟೆಗಳನ್ನು ಅಭಿವೃದ್ಧಿಗೊಳಿಸಲು 449 ಕೋಟಿ ಪ್ರಸ್ತಾವನೆಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಇದರಲ್ಲಿ ಆಯೋಕ ಕೇವಲ 27 ಅಣೆಕಟ್ಟೆಗಳ ಅಭಿವೃದ್ಧಿಗೆ ಅನುಮೋದನೆ ನೀಡಿತ್ತು. ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟೆಗಳನ್ನು ಪುನಶ್ಚೇತನ ಮತ್ತು ಆಧುನೀಕರಣಕ್ಕೆ 186 ಕೋಟಿ ರುಪಾಯಿ ಪಡೆಯಲು ಅನುಮೋದನೆ ಸಿಕ್ಕಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಐದು ಅಣೆಕಟ್ಟೆಗಳ ಆಧುನೀಕರಣ ಪ್ರಸ್ತಾಪಕ್ಕೂ ಈಗ ಅನುಮೋದನೆ ಸಿಕ್ಕಿದ್ದು, ಇದರಲ್ಲಿ ಕೆ.ಆರ್.ಎಸ್, ಬೆಣ್ಣೆತೊರಾ, ಅಮರ್ಜಾ, ಹಿಡಕಲ್ ಮತ್ತು ಮಲಪ್ರಭ ಅಣೆಕಟ್ಟೆಗಳನ್ನು 95 ಕೋಟಿ ರುಪಾಯಿಗಳಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರ ಮಧ್ಯೆ ಸರ್ಕಾರ ಮತ್ತೆ 10 ಅಣೆಕಟ್ಟೆಗಳನ್ನು ಆಧುನೀಕರಣಗೊಳಿಸಬೇಕೆಂದು ಹೆಚ್ಚುವರಿ 175 ಕೋಟಿ ರುಪಾಯಿ ನೆರವನ್ನು ಕೇಳಿದೆ. ಇದಕ್ಕೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸಿಗುತ್ತಿದಂತೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.

SCROLL FOR NEXT