ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದು ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಜೆ.ಜಯಲಲಿತಾ ಅವರ ವಿರುದ್ಧ ರಾಜ್ಯ ಸರ್ಕಾರ ಕೊನೆಗೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಮೇ 13ರಂದು ಜಯಲಲಿತಾ ನಿರ್ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಅಕ್ರಮ ಆಸ್ತಿ ಗಳಿಕೆ ಲೆಕ್ಕಾಚಾರದಲ್ಲಿ ತಪ್ಪಾಗಿದ್ದು, ಲೆಕ್ಕಾಚಾರ ಸರಿಪಡಿಸಿದರೆ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಮಾಣ ಶೇ.76ರಷ್ಟು ಹೆಚ್ಚಾಗುತ್ತದೆ. ಸ್ವತಃ ಆರೋಪಿಗಳೇ ಕೆಲ ಅಂಕಿ ಅಂಶಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಹೈಕೋರ್ಟ್ ಕಡಿಮೆ ಅಂಕಿ ಅಂಶವನ್ನು ಪರಿಗಣಿಸಿದೆ. ಹೀಗಾಗಿ ಹೈಕೋರ್ಟ್ ತೀರ್ಪು ದೋಷಪೂರಿತವಾಗಿದ್ದು, ತೀರ್ಪು ರದ್ದುಪಡಿಸಬೇಕು ಎಂದು ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ.
ಸರ್ಕಾರದ ವಿಶೇಷ ಅಭಿಯೋಜಕ ಬಿ.ವಿ.ಆಚಾರ್ಯ ಅವರು 2700 ಪುಟಗಳ ಮೇಲ್ಮನವಿ ಸಿದ್ಧಪಡಿಸಿದ್ದು, ಅದನ್ನು ಅವರ ಸಹಾಯಕ ಸಂದೇಶ ಚೌಟಾ ಅವರು ಇಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಜಯಲಲಿತಾ ಹಾಗೂ ಅವರ ಸಹಚರರ ವಿರುದ್ಧ ಆದಾಯಕ್ಕೆ ಮೀರಿ ಆಸ್ತಿ ಸಂಗ್ರಹಿಸಿದ ಪ್ರಕರಣದ ವಿಚಾರಣೆ ರಾಜ್ಯಕ್ಕೆ ವರ್ಗಾವಣೆಗೊಂಡ ನಂತರ ತಾಂತ್ರಿಕವಾಗಿ ರಾಜ್ಯದ ಪರವಾಗಿ ಅಭಿಯೋಜಕರನ್ನು ನಿಯೋಜಿಸುವುದು ಹಾಗೂ ವಿಚಾರಣೆಗೆ ಪೂರಕವಾಗಿರುವ ಜವಾಬ್ದಾರಿ ನಿರ್ವಹಣೆ ಕರ್ನಾಟಕಕ್ಕೆ ಅನಿವಾರ್ಯವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜಯಲಲಿತಾ ಅವರ ವಿರುದ್ಧ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಜಯಲಲಿತಾ ರಾಜ್ಯ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇ 11ರಂದು ರಾಜ್ಯ ಉಚ್ಛ ನ್ಯಾಯಾಲಯ ಜಯಲಲಿತಾ ಪರ ತೀರ್ಪು ನೀಡಿತ್ತು. ಹೀಗಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಪಾಲಿಗೆ ಬಂದಿತ್ತು.
ಕಾನೂನು ಹೋರಾಟದಲ್ಲಿ ಕರ್ನಾಟಕವೇ ಎಲ್ಲ ಜವಾಬ್ದಾರಿ ನಿರ್ವಹಿಸಬೇಕೆಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ಸೂಚಿಸಿದ್ದರ ಜತೆಗೆ, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ವಿಶೇಷ ಅಭಿಯೋಜಕರು ಮತ್ತು ಕಾನೂನು ಇಲಾಖೆ ಮೇಲ್ಮನವಿ ಸಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯ ನೀಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.