ಬೆಂಗಳೂರು: ಬೆಳಗಾವಿ ಅಧಿವೇಶನದ ನಂತರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಕರ ಸದನದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಗುಣಾತ್ಮಕ ಶಿಕ್ಷಣ, ಮೂಲಭೂತ ಸೌಕರ್ಯಗಳು' ರಾಜ್ಯಮಟ್ಟ ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲಾಗುವುದು. ಪತಿ-ಪತ್ನಿ ವರ್ಗಾವಣೆ ಕುರಿತು ಇದ್ದ ಸಮಸ್ಯೆ ನಿವಾರಿಸಲು ಕಳೆದ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ 62,000 ಮಂದಿ ವರ್ಗಾವಣೆಗೆ ಅವಕಾಶ ಕೋರಿದ್ದರು. ಅ ದರಲ್ಲಿ 13,000 ಜನರನ್ನು ವರ್ಗಾವಣೆ ಮಾಡಲಾಗಿದೆ.
ಪತಿ-ಪತ್ನಿ, ಸಾಮಾನ್ಯ ಸೇರಿ ದಂತೆ ಎಲ್ಲ ಪ್ರಕರಣಗಳು ಸೇರಿ ಶೇ.1ರಷ್ಟು ವರ್ಗಾವಣೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ನೀತಿ ಅಂತಿಮಗೊಳಿಸಿದ ನಂತರವೇ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು. ಬಿಇಒ 2 ವರ್ಷ ಮತ್ತು ಡಿಡಿಪಿಐ 3 ವರ್ಷ ಒಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು ಹಾಗೂ ತಮ್ಮ ಸ್ವಂತ ಜಿಲ್ಲೆಗಳಲ್ಲಿ ಕಾರ್ಯ ನಿರ್ವಸುವಂತಿಲ್ಲ ಎಂದ ಅವರು, ಶಿಕ್ಷಕರ ಆರೋಗ್ಯಕ್ಕಾಗಿರುವ ಜ್ಯೋತಿ ಸಂಜೀವಿನಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. 1967ರಿಂದ ಇಲ್ಲಿಯವರೆಗೆ ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ. ಇವರ ನೇಮಕವಾದರೆ ಬಹುತೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.
ಪ್ರಾಥಮಿಕ ಪೂರ್ವ ತರಗತಿ (ಎಲ್.ಕೆ.ಜಿ, ಯುಕೆಜಿ) ಆರಂಭಿಸ ಬೇಕೆಂದು ಕೇಳಿದ್ದೀರಿ. ಈ ಸಂಬಂಧ ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕಾಗಿದೆ. ಪ್ರಾಥಮಿಕ ಪೂರ್ವ ಶಿಕ್ಷಣ (ಎಲ್‍ಕೆಜಿ, ಯುಕೆಜಿ)ವನ್ನು ಅಧಿಕೃತವಾಗಿ ಸರ್ಕಾರವೇ ಆರಂಭಿಸಬೇಕು ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಉಗ್ರಪ್ಪ ಮಾತನಾಡಿ, ಸಂವಿಧಾನದ ಪ್ರಕಾರ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು.
ಸುಪ್ರೀಂ ಕೋರ್ಟ್ ಇದಕ್ಕೆ ವ್ಯತಿರಕ್ತವಾದ ತೀರ್ಪು ನೀಡಿದೆ. ಆದ್ದರಿಂದ ರಾಷ್ಟ್ರೀಯಮಟ್ಟದಲ್ಲಿ ಶಿಕ್ಷಣ ನೀತಿ ರೂಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಶಿಕ್ಷಕರ ಬೇಡಿಕೆಗಳು:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ವೇತನ ತಾರತಮ್ಯ ನಿವಾರಿಸಲು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ನೀಡುತ್ತಿರುವ ? ರೂ 300 ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.
ನಲಿ-ಕಲಿ ಯೋಜನೆ ಸರ್ಕಾರಿ ಶಾಲೆಗೆ ಮಾತ್ರವಿದ್ದು, 1-3ನೇ ತರಗತಿಗೆ ಒಂದೆಡೆ ಬೋಧಿಸುವುದು ಸಮಸ್ಯೆ. ಆದ್ದರಿಂದ ನಲಿ-ಕಲಿ ಯೋಜನೆ ರದ್ದುಗೊಳಿಸಬೇಕು. ಶಿಕ್ಷಕರ ವರ್ಗಾವಣೆ ಲೋಪ ಸರಿಪಡಿಸುವುದೂ ಸೇರಿದಂತೆ 25 ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಮ್‍ಪಾಲ್‍ಸಿಂಗ್, ಪ್ರಧಾನ ಕಾರ್ಯದರ್ಶಿ ಕಮಲಕಾಂತ್ ತ್ರಿಪಾಠಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸತ್ಯಮೂರ್ತಿ ಉಪಸ್ಥಿತರಿದ್ದರು.