ಪ್ರಧಾನ ಸುದ್ದಿ

ತಮಿಳುನಾಡು ಉಪ ಚುನಾವಣೆ: ಜಯಾಗೆ ಭಾರಿ ಮುನ್ನಡೆ

Lingaraj Badiger

ಚೆನ್ನೈ: ಬಹು ನಿರೀಕ್ಷಿತ ಆರ್.ಕೆ.ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಭಾರಿ ಮುನ್ನಡೆ ಸಾಧಿಸಿದ್ದಾರೆ.

ಚೆನ್ನೈನ ರಾಣಿ ಮೇರಿ ಕಾಲೇಜ್‌ನಲ್ಲಿ ಇಂದು ಬೆಳಗ್ಗೆಯಿಂದ ಮಣ ಎಣಿಕೆ ಕಾರ್ಯ ನಡೆಯುತ್ತಿದ್ದು, ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಎಐಎಡಿಎಂ ಅಭ್ಯರ್ಥಿ ಜಯಲಲಿತಾ ಅವರು 38,406 ಮತಗಳನ್ನು ಪಡೆದು ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರತಿಸ್ಪರ್ಧಿ ಸಿಪಿಎಂನ ಅಭ್ಯರ್ಥಿ ಸಿ.ಮಹೇಂದ್ರನ್ ಅವರು ಕೇವಲ 2809 ಮತಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ನಿರೀಕ್ಷೆಯಂತೆ ತಮಿಳುನಾಡು ಸಿಎಂ ಭರ್ಜರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಫಲಿತಾಂಶಕ್ಕೂ ಮುನ್ನವೇ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ಕೋರ್ಟ್‌ನಿಂದ ನಾಲ್ಕು ವರ್ಷ ಜೈಲು ಶಿಕ್ಷೆ ಗುರಿಯಾಗಿದ್ದರಿಂದ ಅವರ ಸದಸ್ಯತ್ವ ರದ್ದುಗೊಂಡಿತ್ತು. ಬಳಿಕ ಹೈಕೋರ್ಟ್ ಕ್ಲೀನ್‌ಚಿಟ್ ಪಡೆದ ಜಯಾ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಉಪ ಚುನಾವಣೆ ಮೂಲಕ ಎಐಎಡಿಎಂಕೆ ಮುಖ್ಯಸ್ಥೆ ತಮಿಳುನಾಡು ವಿಧಾನಸಭೆಗೆ ಮರು ಆಯ್ಕೆಯಾಗುತ್ತಿದ್ದಾರೆ.

ಕಳೆದ ಜೂನ್ 27ರಂದು ಆರ್.ಕೆ. ನಗರ ವಿಧಾನಸಭೆಗೆ ಉಪ ಚುನಾವಣೆ ನಡೆದಿತ್ತು. ಸಮಾಜ ಸೇವಕ ಟ್ರಾಫಿಕ್‌ ರಾಮಸ್ವಾಮಿ ಸೇರಿದಂತೆ  28 ಅಭ್ಯರ್ಥಿಗಳು ಕಣದಲ್ಲಿದ್ದರು.

SCROLL FOR NEXT