ಪ್ರಧಾನ ಸುದ್ದಿ

ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ "ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ

Mainashree

ನವದೆಹಲಿ: ಭಾರತದಲ್ಲಿ ನಿಷೇಧವೇರಲಾಗಿರುವ ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಮುಕೇಶ್ ಸಿಂಗ್ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ "ಇಂಡಿಯಾಸ್ ಡಾಟರ್' ಸಾಕ್ಷ್ಯ ಚಿತ್ರ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.

ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಮುಕೇಶ್ ಸಿಂಗ್ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ ಸಾಕ್ಷ್ಯ ಚಿತ್ರ "ಇಂಡಿಯಾಸ್ ಡಾಟರ್' ಪ್ರಸಾರ ಮಾಡದಂತೆ ಭಾರತ ಹೇರಿದ ಒತ್ತಡಕ್ಕೆ ಮಣಿಯದ ಬಿಬಿಸಿ ನಿಗದಿಗಿಂತ ಮೊದಲೇ ಪ್ರಸಾರ ಮಾಡಿತ್ತು. ನಿನ್ನೆ ರಾತ್ರಿ ಇಂಗ್ಲೆಂಡ್ ನಲ್ಲಿ ಸಾಕ್ಷ್ಯಚಿತ್ರ ಪ್ರಸಾರಗೊಂಡಿತ್ತು. ಅಲ್ಲದೇ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್ ನಲ್ಲೂ ಅಪ್ ಲೋಡ್ ಮಾಡಲಾಗಿದೆ. 

ಯೂಟ್ಯೂಬ್ ನಲ್ಲಿ ಈ ಸಾಕ್ಷ್ಯಚಿತ್ರ ಸಂಚಲನ ಮೂಡಿಸಿದೆ ಎಂದು ವರದಿಗಳು ಹೇಳುತ್ತಿವೆ. ಯೂಟ್ಯೂಬ್ ಬಳಕೆದಾರ ಕೇಟ್ ಬೆವನ್ ಎಂಬ ಹೆಸರಿನಲ್ಲಿ 59 ನಿಮಿಷಗಳ ಸಾಕ್ಷ್ಯಚಿತ್ರ ಅಪ್ ಲೋಡ್ ಆಗಿದ್ದು, ಇದನ್ನು ಸಾಕಷ್ಟು ಮಂದಿ ಶೇರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು.

ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್‌ ಸಿಂಗ್‌ನ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ ಸಾಕ್ಷ್ಯ­ಚಿತ್ರ ಪ್ರಸಾರ ಮಾಡದಂತೆ ಬಿಬಿಸಿಗೆ ಸರ್ಕಾರ ಹಾಗೂ ನ್ಯಾಯಾಂಗ ಸೂಚಿಸಿತ್ತು. 

ಈ ಸಾಕ್ಷ್ಯ­ಚಿತ್ರವನ್ನು ಮಹಿಳಾ ದಿನಾಚರಣೆಯಾದ ಮಾರ್ಚ್ 8ರಂದು ಪ್ರಸಾರ ಮಾಡಲು ನಿರ್ಧರಿಸಿತ್ತು. ಆದರೆ ಇದನ್ನು ಪ್ರಸಾರ ಮಾಡದಂತೆ ಭಾರತ ಸರ್ಕಾರ ಒತ್ತಡ ಹೇರಿದ ಹಿನ್ನಲೆಯಲ್ಲಿ, ಸರ್ಕಾರದ ಸೂಚನೆಗೆ ಮಣಿಯದ ಬಿಬಿಸಿ, ನಿಗದಿಗಿಂತ ಮೊದಲೇ ಪ್ರಸಾರ ಮಾಡಿದೆ.

ಈ ನಡುವೆ ಸಾಕ್ಷ್ಯ ಚಿತ್ರದ ನಿರ್ದೇಶಕಿ ಲೆಸ್ವಿ ಉಡ್ವಿನ್‌ ಬಂಧನದ ಭೀತಿಯಿಂದ ಇಂಗ್ಲೆಂಡ್ ಗೆ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT