ನವದೆಹಲಿ: ಪ್ರತ್ಯೇಕವಾದಿ ತೀವ್ರಗಾಮಿ ಮಾಶರತ್ ಆಲಂನನ್ನು ಬಂಧನಮುಕ್ತಗೊಳಿಸುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ ಸಯ್ಯದ್ ಅವರ ನಿರ್ಧಾರ ರಾಜಕೀಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆಲಂನ ವಿರುದ್ಧ ದಾಖಲಾಗಿರುವ ಎಲ್ಲ ೨೭ ಕ್ರಿಮಿನಲ್ ಅಪರಾಧಗಳ ತನಿಖೆ ಮುಂದುವರೆಸುವಂತೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಇದನ್ನು ಲೋಕಸಭೆಯಲ್ಲಿ ಬಿಚ್ಚಿಟ್ಟ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಬಿಜೆಪಿ-ಎನ್ ಡಿ ಎ ಸರ್ಕಾರ ಆಲಂ ವಿರುದ್ಧ ಇರುವ ಎಲ್ಲ ಪ್ರಕರಣಗಳಿಗೂ ಜಾಮೀನು ನೀಡುರುವುದನ್ನು ಪ್ರಶ್ನಿಸಲು ಜಮ್ಮು ಕಾಶ್ಮೀರ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
ದೇಶದ ಏಕತೆ-ಐಕ್ಯತೆ ಮತ್ತು ಜಮ್ಮು ಕಾಶ್ಮೀರ ರಾಜ್ಯಕ್ಕೆ ಧಕ್ಕೆ ಬರುವಂತಹ ಆಲಂ ಮತ್ತು ಅವನ ಸಹಚರರ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ರಾಜ್ಯ ಸರ್ಕಾರಕ್ಕೆ ಕೇಳಿದ್ದೇವೆ. ಹಾಗೆಯೆ ಈ ಕಣ್ಗಾವಲಿನಿಂದ ಆಲಂ ಮತ್ತು ಸಹಚರರ ಯಾವುದೇ ದೇಶವಿರೋಧಿ ಚಟುವಟಿಕೆಗಳು ಕಂಡುಬಂದರೆ ಕೂಡಲೆ ಕೇಂದ್ರಕ್ಕೆ ತಿಳಿಸುವಂತೆ ಹಾಗು ಸಾರ್ವಜನಿಕ ಸುರಕ್ಷಿತ ಕಾಯ್ದೆಯ ಪ್ರಕಾರ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಹಿಂದೆ ಸೂಚಿಸಿದ್ದಂತೆ ಆಲಂ ಬಿಡುಗಡೆಯ ಮೇಲೆ ಕೇಂದ್ರಕ್ಕೆ ವರದಿ ಸಲ್ಲಿಸಿರುವ ರಾಜ್ಯ ಸರ್ಕಾರ, ಜಮ್ಮುವಿನ ಜಿಲ್ಲಾ ಮೆಜೆಸ್ಟ್ರೇಟ್ ಪರೀಕ್ಷಿಸಿರುವಂತೆ ಆಲಂನನ್ನು ಮತ್ತೆ ಬಂಧಿಸಲು ಯಾವುದೇ ನಿಖರ ಕಾರಣಗಳಿಲ್ಲ. ಈ ಹಿಂದೆ ಅವರನ್ನು ಬಂಧಿಸಿದ ಕಾರಣಗಳನ್ನು ಹೈಕೋರ್ಟ್ ವಜಾ ಮಾಡಿತ್ತು ಎಂದು ವರದಯಿಲ್ಲಿ ತಿಳಿಸಿದ್ದರ ಪರಿಣಾಮ ಕೇಂದ್ರ ಸರ್ಕಾರ ಈ ಹೊಸ ಸೂಚನೆಗಳನ್ನು ನೀಡಿದೆ.