ಶ್ರೀನಗರ: ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಶೂನ್ಯ ಸಹನೆ ಹೊಂದುವಂತೆ ಭದ್ರತಾ ಪಡೆಗಳಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಸೂಚಿಸಿದ್ದಾರೆ. ಮಾರ್ಚ್೧ ರಂದು ಬಿಜೆಪಿ-ಪಿಡಿಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಭದ್ರತೆಯ ಬಗ್ಗೆ ವಿವೇಚನೆ ನಡೆಸಿದ ಈ ಚೊಚ್ಚಲ 'ಒಗ್ಗೂಡಿಸಿದ ಪ್ರಧಾನ ಕಾರ್ಯಾಲಯ' ಸಭೆಯ ಅಧ್ಯಕ್ಷತೆಯನ್ನು ಮುಫ್ತಿ ವಹಿಸಿದ್ದರು.
ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ನಿರ್ಮಲ್ ಸಿಂಗ್, ಸೇನೆ, ಅರೆ ಮಿಲಿಟರಿ ಪಡೆ, ಪೊಲೀಸ್, ನಾಗರಿಕ ಮತ್ತು ಗುಪ್ತಚರ ಇಲಾಖೆಯ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.
'ಒಗ್ಗೂಡಿಸಿದ ಪ್ರಧಾನ ಕಾರ್ಯಾಲಯ' ಸೇನೆ, ಅರೆ ಮಿಲಿಟರಿ ಪಡೆ, ಪೊಲೀಸ್ ಹಾಗು ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆಯನ್ನು ಹೊಂದಿರುತ್ತದೆ. ಈ ಕಾರ್ಯಾಲಯಕ್ಕೆ ರಾಜ್ಯದ ಮುಖ್ಯಮಂತ್ರಿ ಅಧ್ಯಕ್ಷರಾಗಿರುತ್ತಾರೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವುದಕ್ಕೆ ಪ್ರಯತ್ನಿಸುತ್ತಿರುವ ಭದ್ರತಾ ಪಡೆಗಳಿಗೆ ಅಭಿನಂದಿಸಿದ ಮುಫ್ತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಾಗ ಮಾನವೀಯತೆಯ ಮಾರ್ಗವನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಮಾನವ ಹಕ್ಕುಗಳ ಉಲ್ಲಂಘನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ. "ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹಿಸುವುದಿಲ್ಲ ಮತ್ತು ಇಂತಹ ಉಲ್ಲಂಘನೆಗಳಲ್ಲಿ ಭಾಗಿಯಾದವರಿಗೆ ನೆಲದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.