ಪ್ರಧಾನ ಸುದ್ದಿ

ಮಹಾಬೋಧಿ ವೃಕ್ಷದ ಕೆಳಗೆ ಅರ್ಧಗಂಟೆ ಕಾಲ ಕಳೆದ ಮೋದಿ

Mainashree

ಶ್ರೀಲಂಕಾ: ಶ್ರೀಲಂಕಾದ ಭೇಟಿಯಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲಂಕಾದ ಪುರಾತನ ರಾಜಧಾನಿ ಅನುರಾಧಪುರಕ್ಕೆ ಭೇಟಿ ನೀಡಿದ್ದಾರೆ.

ಅನುರಾಧಪುರಕ್ಕೆ ಭೇಟಿ ನೀಡುವ ಮೂಲಕ ಅಲ್ಲಿನ ಪವಿತ್ರ ಮಹಾಬೋಧಿ ವೃಕ್ಷ ಸಂದರ್ಶಿಸಿ ಬೌದ್ಧಮತಕ್ಕೂ ಭಾರತಕ್ಕೂ ಇರುವ ಬಾಂಧವ್ಯ ಪ್ರದರ್ಶನ ಮಾಡಿದ್ದಾರೆ. ಮಹಾಭೋಧಿ ವೃಕ್ಷದ ಅಡಿ ಅರ್ಧಗಂಟೆ ಕಾಲ ಕಳೆದ ಮೋದಿ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮೋದಿಗೆ ಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿನೇನಾ ಅವರು ಸಾಥ್ ನೀಡಿದ್ದಾರೆ.
ಮೋದಿ ಮತ್ತು ಸಿರಿಸೇನಾ ಅವರೂ ಕೂಡ ಈ ಪವಿತ್ರ ವೃಕ್ಷಗಳಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು. ಅನುರಾಧಪುರ ಭೇಟಿ ನಂತರ ಮೋದಿ ಜಾಫ್ನಾ ಹಾಗೂ ತಲೈಮನ್ನಾರ್‌ಗಳಿಗೆ  ತೆರಳಲಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ತಮ್ಮ 5 ದಿನಗಳ ವಿದೇಶ ಪ್ರವಾಸವನ್ನು ಪೂರೈಸಿ ಭಾರತಕ್ಕೆ ಹಿಂದಿರುಗುವರು.
ಭಾರತದ ಬುದ್ಧಗಯಾದ ಬೋಧಿ ವೃಕ್ಷದಡಿ ಗೌತಮ ಬುದ್ಧನಿಗೆ ಜ್ಞಾನೋದಯವಾದ ಸಂಸ್ಮರಣೆಗಾಗಿ ಕ್ರಿಸ್ತಪೂರ್ವ 288ರಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯ ಮಗಳು ಸಂಘಮಿತ್ರೆ ಅವರ ಒಂದು ಶಾಖೆಯನ್ನು ಶ್ರೀ ಲಂಕಾದ ಅಂದಿನ ರಾಜಧಾನಿ ಅನುರಾಧಪುರಕ್ಕೆ ತಂದಿದ್ದಳು ಎಂಬ ಕಥೆಯೂ ಇದೆ.

ಅಂದು ಸಂಘಮಿತ್ರೆ ನೆಟ್ಟ ಈ ಮರ ಇಂದಿಗೂ ಇಲ್ಲಿ ಬೌದ್ಧಮತಾವಲಂಬಿಗಳ ಪುಣ್ಯ ಕ್ಷೇತ್ರವಾಗಿದೆ. ಇದೇ ಸ್ಥಳದಲ್ಲಿ ಪುರಾತನ ಕಾಲದ ಒಂದು ಬೃಹತ್ತಾದ ಅತ್ತಿಮರವೂ ಇದ್ದು, ಇದನ್ನು ಪ್ರಪಂಚದಲ್ಲೇ ಅತ್ಯಂತ ಹಳೆಯ ಮರ ಎಂದು ಗುರುತಿಸಲಾಗಿದೆ. ಬೋಧಿ ವೃಕ್ಷದಂತೆ ಈ ಅತ್ತಿಮರವೂ ಕೂಡ ದೈವತ್ವ ಪಡೆದುಕೊಂಡಿದೆ.  

SCROLL FOR NEXT