ಪ್ರಧಾನ ಸುದ್ದಿ

೮ ವರ್ಷ ಕಳೆದರೂ '೯೩ ಮುಂಬೈ ಸ್ಫೋಟ' ತಪ್ಪಿತಸ್ಥರಿಗೆ ಜಾರಿಯಾಗದ ಶಿಕ್ಷೆ

Guruprasad Narayana

ಮುಂಬೈ: ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಜನಕ್ಕೆ ಅಂದರೆ ೧೨ ಜನಕ್ಕೆ ಗಲ್ಲು ಶಿಕ್ಷೆ ನೀಡಿದ ದಾಖಲೆ ಹೊಂದಿರುವವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಪಿ ಡಿ ಕೋಡೆ. ಇದು ಮುಂಬೈಯನ್ನು ಬೆಚ್ಚಿ ಬೀಳಿಸಿದ ೧೯೯೩ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ.

ಈ ಪ್ರಕರಣದಲ್ಲಿ ತಾವು ತೀರ್ಪು ಕೊಟ್ಟು ಸುಮಾರು ೮ ವರ್ಷ ಕಳೆದಿದ್ದರೂ, ಶಿಕ್ಷೆಯನ್ನು ಜಾರಿ ಮಾಡಲು ಯಾರೂ ಉನ್ನತ ನ್ಯಾಯಾಲಯಗಳ ಮೊರೆ ಹೋಗಿಲ್ಲ ಎಂದು ನ್ಯಾಯಾಧೀಶ ಕೋಡೆ ವಿಷಾದ ವ್ಯಕ್ತಪಡಿಸುತ್ತಾರೆ.

"ನ್ಯಾಯಾಧೀಶನ ಕರ್ತವ್ಯ ತೀರ್ಪು ನೀಡುವುದು. ಇದನ್ನು ಜಾರಿಗೆ ತರುವವರು ಮತ್ತೊಂದು ಏಜೆನ್ಸಿ. ಒಂದು ಸಮವಾದ ಸಮಯದಲ್ಲಿ ಈ ಶಿಕ್ಷೆ ಜಾರಿಯಾಗಿಲ್ಲ ಎಂದಾದರೆ ಉನ್ನತ ಕೋರ್ಟ್ ಗಳ ಮೊರೆ ಹೋಗಬಹುದು. ಶಿಕ್ಷೆಯನ್ನು ಕಡಿತಗೊಳಿಸಿಕೊಳ್ಳಲು ಜನ ಉನ್ನತ ನ್ಯಾಯಾಲಯಗಳ ಮೊರೆ ಹೋಗುತ್ತಾರೆ ಆದರೆ ಕೊಟ್ಟಿರುವ ಶಿಕ್ಷೆಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಲು ಸಾಮಾನ್ಯವಾಗಿ ಯಾರೂ ಕೋರ್ಟ್ ಮೆಟ್ಟಿಲೇರುವುದಿಲ್ಲ" ಎಂದು ಕೋಡೆ ಮಂಗಳವಾರ ತಿಳಿಸಿದ್ದಾರೆ. ಕಳೆದ ವರ್ಷ ಬಾಂಬೆ ಹೈಕೋರ್ಟ್ ನಿಂದ ನಿವೃತ್ತಿ ಪಡೆದ ಕೋಡೆ, ೧೯೯೬ ರಿಂದ ೨೦೦೭ ರವರೆಗೆ ವಿಶೇಷ ಟಾಡಾ ಕೋರ್ಟ್ ನ್ಯಾಯಾಧೀಶರಾಗಿದ್ದರು ಹಾಗು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಚಾರಣೆಯ ಮುಖ್ಯ ನ್ಯಾಯಾಧೀಷರಾಗಿದ್ದರು.

ಸೆಪ್ಟಂಬರ್ ೨೦೦೭ ರಲ್ಲೇ ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗಿದ್ದರೂ ಯಾರನ್ನೂ ಇನ್ನೂ ಗಲ್ಲಿಗೇರಿಸದೆ ಇರುವುದರಿಂದ ಕೋಡೆ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೆ ಮಾರ್ಚ್ ೧೨ಕ್ಕೆ ಈ ದುರ್ಘಟನೆ ನಡೆದು ೨೨ ವರ್ಷ!

ವಿಶ್ವದಾದ್ಯಂತ ಗಲ್ಲು ಶಿಕ್ಷೆಯ ಪರ ವಿರೋಧ ವಾದಗಳು ನಡೆಯುತ್ತಿರುವುದನ್ನು ಒಪ್ಪಿಕೊಳ್ಳುವ ನಿವೃತ್ತ ನ್ಯಾಯಾಧೀಶ ಕೋಡೆ, ಅದು ಕಾನೂನಿನಲ್ಲಿ ಮಾನ್ಯತೆ ಇರುವಷ್ಟು ದಿನ ನ್ಯಾಯಾಧೀಶರು ಈ ಶಿಕ್ಷೆ ನೀಡುವುದಕ್ಕೆ ಹಿಂಜರಿಯಬಾರದು ಎನ್ನುತ್ತಾರೆ. "ಅಲ್ಲದೆ ಮೇಲಿನ ಕೋರ್ಟ್ ಗಳಿಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಕೂಡ ಇದೆ. ಉನ್ನತ ಕೋರ್ಟ್ಗಳು ಶಿಕ್ಷೆ ಸರಿಯೋ ಅಲ್ಲವೋ ಎಂಬುದನ್ನು ನಿರ್ಧರಿಸುತ್ತವೆ" ಎಂದಿದ್ದಾರೆ.

ಭಯೋತ್ಪಾದಕರನ್ನು ಹೇಡಿಗಳು ಎಂದಿರುವ ಕೋಡೆ "ಜನರು ಭಯೋತ್ಪಾದಕರನ್ನು ಧೈರ್ಯಶಾಲಿಗಳು ಎಂದು ನಂಬಿರುತ್ತಾರೆ. ನನ್ನ ಅನುಭವದ ಪ್ರಕಾರ ಅವರು ಹೇಡಿಗಳು. ಅವರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಬಚ್ಚಿಟ್ಟುಕೊಂದು ತಮ್ಮ ಕೃತ್ಯಗಳನ್ನು ನಡೆಸುತ್ತಾರೆ" ಎಂದಿದ್ದಾರೆ ನ್ಯಾಯಾಧೀಶ ಕೋಡೆ.

SCROLL FOR NEXT