ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 95 ರನ್ ಗಳ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಕ್ಲಾರ್ಕ್ ಬಳಗ ಸ್ಮಿತ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 328 ರನ್ ಗಳ ಬೃಹತ್ ಮೊತ್ತ ಪೇರಿಸಿತು. 329 ರನ್ ಗಳ ಗುರಿ ಬೆನ್ನುಹತ್ತಿದ ಭಾರತ ತಂಡ ಕೇವಲ 233 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ 95 ರನ್ ಗಳ ಹೀನಾಯ ಸೋಲು ಅನುಭವಿಸಿದೆ.
ಆಸಿಸ್ ನೀಡಿದ ಬೃಹತ್ ಸವಾಲು ಬೆನ್ನಟ್ಟಿದ ಭಾರತಕ್ಕೆ ಆಸ್ಟ್ರೇಲಿಯಾದ ವೇಗಿಗಳು ಆರಂಭದಿಂದಲೂ ಮಾರಕವಾಗಿ ಪರಿಣಮಿಸಿದರು. ಪ್ರಮುಖ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ (34 ರನ್), ಶಿಖರ್ ಧವನ್ (45 ರನ್), ಅಜಿಂಕ್ಯಾ ರಹಾನೆ (44 ರನ್) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (65 ರನ್) ಹೋರಾಟ ಪಂದ್ಯಗೆಲ್ಲಿಸುವಲ್ಲಿ ಸಹಕಾರಿಯಾಗಲಿಲ್ಲ. ಈ ನಾಲ್ಕು ಆಟಗಾರರನ್ನು ಹೊರತು ಪಡಿಸಿ ಉಳಿದ ಯಾವುದೇ ಆಟಗಾರ ಕೂಡ ಆಸಿಸ್ ನ ಮಾರಕ ಬೌಲಿಂಗ್ ಗೆ ಪ್ರತ್ಯುತ್ತರ ನೀಡಲು ಮುಂದಾಗಲಿಲ್ಲ. ಪರಿಣಾಮವಾಗಿ ಭಾರತ 46.5 ಓವರ್ ಗಳಲ್ಲಿ ಕೇವಲ 233 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಫೈನಲ್ ಗೇರಬೇಕೆಂಬ ಅಭಿಮಾನಿಗಳ ಆಸೆಗೆ ತಣ್ಣೀರೆರಚಿತು.
ಆಸ್ಚ್ರೇಲಿಯಾ ಪರ ಜೇಮ್ಸ್ ಫಾಲ್ಕ್ ನರ್ 59 ರನ್ ಗಳಿಗೆ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಮಿಚೆಲ್ ಜಾನ್ಸನ್ ತಲಾ 2 ವಿಕೆಟ್, ಹೆಝಲ್ವುಡ್ 1 ಪಡೆದರು. ಆಸ್ಟ್ರೇಲಿಯಾ ಪರ ಉತ್ತಮವಾಗಿ ಬ್ಯಾಟ್ ಮಾಡಿ ಬಹತ್ ಮೊತ್ತಕ್ಕೆ ಕಾರಣರಾದ ಸ್ಮಿತ್ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.