ಪ್ರಧಾನ ಸುದ್ದಿ

ಯೆಮನ್ ನಿಂದ ರಕ್ಷಣೆಗೊಳಗಾದ ೩೪೯ ಭಾರತೀಯರು ಜಿಬೂಟಿಗೆ ಆಗಮನ

Guruprasad Narayana

ನವದೆಹಲಿ: ಯುದ್ಧದ ಗಲಭೆಗೆ ಒಳಗಾಗಿರುವ ಯೆಮನ್ ನ ಆಡೆನ್ ನಗರದಿಂದ ಕಳೆದ ರಾತ್ರಿ ಭಾರತೀಯ ಯುದ್ಧ ನೌಕೆ ರಕ್ಷಿಸಿರುವ ೩೪೯ ಜನ ಭಾರತೀಯರು ಇಂದು ಜಿಬೂಟಿಗೆ ಬಂದಿಳಿದಿದ್ದು, ಶೀಘ್ರದಲ್ಲೆ ಮುಂಬೈಗೆ ಹಾರಲಿದ್ದಾರೆ.

ಐ ಎನ್ ಎಸ ಸುಮಿತ್ರಾ ಹಡಗಿಗೆ ಆಡೆನ್ ಬಂದರಿಗೆ ತೆರಳುವ ಅನುಮತಿ ಸಿಕ್ಕ ಕೂಡಲೆ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ ೩೪೯ ಭಾರತೀಯರನ್ನು ರಕ್ಷಿಸಲಾಗಿದೆ. ಯೆಮನ್ ನಲ್ಲಿ ಸಿಲುಕಿರುವ ೪೦೦೦ ಭಾರತೀಯರನ್ನು ರಕ್ಷಿಸಲು ವೈಮಾನಿಕ ಮತ್ತು ಸಮುದ್ರದ ಮೂಲಕ ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ಭಾರತ ಕೈಗೊಂಡಿದೆ. ಇದನ್ನು 'ಆಪರೇಶನ್ ರಾಹತ್' ಎಂದು ಹೆಸರಿಸಲಾಗಿದೆ.

ಆಡೆನ್ ಗಲ್ಫ್ ನಲ್ಲಿ ಕಡಲ್ಗಳ್ಳರ ಪರಿವೀಕ್ಷಣೆಗೆ ಇರಿಸಲಾಗಿರುವ ಐ ಎನ್ ಎಸ್ ಸುಮಿತ್ರ ಹಡಗು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಮೊದಲ ಹಡಗು.

೩೪೯ ಜನರು ಈಗ ಸುರಕ್ಷಿತವಾಗಿ ಜೆಬೂಟಿಯಲ್ಲಿ ಇಳಿದಿರುವ ಹಿನ್ನಲೆಯಲ್ಲಿ, ಐ ಎನ್ ಎಸ್ ಸುಮಿತ್ರ ಮತ್ತೆ ಆಡೆನ್ ಬಂದರಿಗೆ ಹಿಂದಿರುಗಲಿದೆ. ವೈಮಾನಿಕ ದಾಳಿಯಿಂದ ಯುದ್ಧದ ತೀವ್ರತೆ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯಾಗಿದ್ದು, ಸ್ವಲ್ಪ ತಡವಾಗುತ್ತಿದೆ ಎನ್ನಲಾಗಿದೆ.

ಹಡಗು ಜಿಬೂಟಿ ತಲುಪಿರುವ ಹಿನ್ನಲೆಯಲ್ಲಿ ರಕ್ಷಣೆಯ ಉಸ್ತುವಾರಿ ಹೊತ್ತಿರುವ ರಕ್ಷಣಾ ಸಚಿವಾಲಯದ ರಾಜ್ಯ ಮಂತ್ರಿ ವಿ ಕೆ ಸಿಂಗ್ ರಕ್ಷಣೆಗೊಳಗಾದ ಭಾರತೀಯರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. 

SCROLL FOR NEXT