ಪುಣೆ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇವರಿಬ್ಬರನ್ನು ಕೇರಳದ ಎರ್ನಾಕುಲಂ ಮೂಲದ ಕೆ ಮುರಳೀಧರನ್(೬೨) ಅಲಿಯಾಸ್ ಥಾಮಸ್ ಜೋಸೆಫ್ ಮತ್ತು ಮಾಲ್ಲಾಪುರಂ ಮೂಲದ ಇಸ್ಮಾಯಿಲ್ ಹಮ್ಜಾ ಚಿರಾಗಪಿಲ್ಲಿ(೨೯) ಅಲಿಯಾಸ್ ಜೇಮ್ಸ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.
ಸುಳಿವಿನ ಜಾಡು ಹಿಡಿದ ಪೊಲೀಸರು ತಾಲೆಗಾಂವ್ ನ ಮೋರ್ಯಾ ಆಸ್ಪತ್ರೆಯಿಂದ ಶುಕ್ರವಾರ ಇವರಿಬ್ಬರನ್ನು ಬಂಧಿಸಲಾಗಿದೆ ಹಾಗು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ವಿ ಮಾನೆ ಅವರ ಎದುರು ಶನಿವಾರ ಹಾಜರುಪಡಿಸಿದ್ದು ಇಬ್ಬರನ್ನೂ ಒಂದು ವಾರದ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಮಾವೋವಾದಿ ನಾಯಕ ಗಣಪತಿಗೆ ಮುರಳೀಧರನ್ ಆಪ್ತ ಸಹಚರ ಹಾಗೂ ಚಿರಾಗಪಲ್ಲಿ ಅವರ ನಂಬಿಕಸ್ಥ ಎಂದು ಎ ಟಿ ಎಸ್ ತಿಳಿಸಿದೆ.
ನಕಲಿ ಗುರುತಿನೊಂದಿಗೆ ಇವರಿಬ್ಬರೂ ಪುಣೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಎಷ್ಟು ಕಾಲದಿಂದ ಇವರಿಬ್ಬರೂ ಇಲ್ಲಿ ವಾಸಿಸುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.