ಪ್ರಧಾನ ಸುದ್ದಿ

ಮುಖ್ಯಮಂತ್ರಿ ಹಾರದಲ್ಲಿ ಶೆಲ್, ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕ್ರಮ: ಹರಿಶೇಖರನ್

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದ ಹಾರದಲ್ಲಿ ಎಲ್‌ಇಡಿ ಲೈಟ್ ಹಾಗೂ ಬ್ಯಾಟರಿ ಶೆಲ್‌ಗಳು ಪತ್ತೆಯಾಗಿದ್ದು, ಭದ್ರತಾ ಲೋಪ ಎಸಗಿರುವ ಸಿಬ್ಬಂದಿ ವಿರುದ್ಧ ಕ್ರನ ಕೈಗೊಳ್ಳುವುದಾಗಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಬ್ಯಾಟರಿ ಶೆಲ್ ಇರುವ ಹಾರ ಹಾಕಿದ್ದ ದಿನ ಕರ್ತವ್ಯದಲ್ಲಿದ್ದ ಅಧಿಕಾರಿ, ಸಿಬ್ಬಂದಿ ಯಾರೆಂದು ಪರಿಶೀಲಿಸಲಾಗಿದೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ವರದಿ ತರಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಆಗಿದ್ದೇನು?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದಲ್ಲಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಚೇರಿಯಿಂದ ಹೊರಬಂದಾಗ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರ ಬೆಂಬಲಿಗರು ಮುಖ್ಯಮಂತ್ರಿಗಾಗಿ ಕಾಯುತ್ತಿದ್ದರು. ಅವರು ಕಚೇರಿಯಿಂದ ಹೊರ ಬರುತ್ತಿದ್ದಂತೆ ಎಳ್‌ಇಡಿ ಲೈಟ್ ಇರುವ ಹಾರ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರಿಗೆ ಸೂಚಿಸಿದ್ದಾರೆ.

ಸಿಎಂಗೆ ಅಭಿಮಾನಿಗಳು ಉಡುಗೊರೆ ನೀಡುತ್ತಾರೆ. ಅವು ಮುಖ್ಯಮಂತ್ರಿಗೆ ತಲುಪುವ ಮುನ್ನ ಭದ್ರತಾ ಶಿಷ್ಟಾಚಾರವನ್ನು ಪೂರೈಸಬೇಕು ಎಂದು ನಿವೃತ್ತ ಐಜಿಪಿ ಗೋಪಾಲ್ ಹೊಸೂರು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವ ಭಯ ಇಲ್ಲ: ಸಿಎಂ
ಮೈಸೂರು: ನಿನ್ನೆ ನನ್ನನ್ನು ಭೇಟಿ ಮಾಡಲು ಬಂದ ಪರಿಚಿತ ವ್ಯಕ್ತಿಯೊಬ್ಬರು ತಂದ ಹಾರದಲ್ಲಿ ಎಲ್‌ಇಡಿ ಬಲ್ಬ್ ಇತ್ತು. ಅವರು ಅಲಂಕಾರಕ್ಕೆ ಅಳವಡಿಸಿದ್ದರು. ಅವರು ನನಗೆ ಬೇಕಾದವರೆ. ಪೊಲೀಸರು ಆತಂಕಗೊಂಡಿದ್ದಷ್ಟೇ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ನಮಗೆ ಯಾವ ಭವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

SCROLL FOR NEXT