ಪ್ರಧಾನ ಸುದ್ದಿ

ಯದುವೀರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭ, ಅರಮನೆಯಲ್ಲಿ ಹೋಮ ಹವನ

Lingaraj Badiger

ಮೈಸೂರು: ಯದುವಂಶದ ಉತ್ತರಾಧಿಕಾರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಅಂಬಾವಿಲಾಸ ಅರಮನೆಯಲ್ಲಿ ಹೋಮ ಹವನ ಸೇರಿದಂತೆ ಕೆಲ ಧಾರ್ಮಿಕ ಆಚರಣೆಗಳು ನಡೆದವು.

ನಾಳೆ ಯದುವಂಶದ ಉತ್ತರಾಧಿಕಾರಿಯ ಪಟ್ಟಾಭಿಷೇಕ ನಡೆಯಲಿದ್ದು, ಪಟ್ಟಾಭಿಷೇಕದ ಅಂಗವಾಗಿ ಇಂದು ಬೆಳಿಗ್ಗೆ ಎಣ್ಣೆಶಾಸ್ತ್ರ, ಕಂಕಣಧಾರಣೆ ನಂತರ ಹೋಮ, ಹವನಗಳನ್ನು ಪುರೋಹಿತರು ನೆರವೇರಿಸಿದರು. ಆಮೇಲೆ ರಾಜ ಗುರುಗಳಾದ ಬ್ರಹ್ಮತಂತ್ರ ಪರತಂತ್ರ ಪರಕಾಲ ಮಠದ ಗುರುಗಳಾದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿ ಪಾದಗಳಿಗೆ ಯದುವೀರ ಅವರು ಪೂಜೆ ನೆರವೇರಿಸಿದರು.

28ರಂದು ಬೆಳಿಗ್ಗೆ ಲಕ್ಷ್ಮೀನಾರಾಯಣ ಹೋಮ, ಉಮಾಮಹೇಶ್ವರ ಹೋಮ, ವಾಣಿಬ್ರಹ್ಮ ಹೋಮ, ಶ್ರೀರಾಮ ತಾರಕ ಹೋಮ ನಡೆಯಲಿವೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.30ರಿಂದ 10.35ರ ಒಳಗೆ ನಡೆಯುವ ಕರ್ಕಾಟಕ ಶುಭಲಗ್ನದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಅರಮನೆ ಹಾಗೂ ನಗರದ ಪ್ರಮುಖ ದೇವಾಲಯಗಳಿಗೆ ಯದುವೀರ ಭೇಟಿ ನೀಡುವರು. ಸಂಜೆ 6.30 ಗಂಟೆಗೆ ದರ್ಬಾರ್‌ ಹಾಲ್‌ನಲ್ಲಿ ಯದುವೀರಗೆ ಆರತಕ್ಷತೆ ನಡೆಯಲಿದೆ. ಈ ಸಂದರ್ಭದಲ್ಲಿ ಇಡೀ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ. ಅಲ್ಲದೆ, ಕರ್ನಾಟಕ ಸಂಗೀತವನ್ನು ಪೊಲೀಸ್‌ ಬ್ಯಾಂಡ್‌ ನುಡಿಸಲಿದೆ.

ಪಟ್ಟಾಭಿಷೇಕ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ರಾಜವಂಶಸ್ಥರು ರಾಜಕಾರಣಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

SCROLL FOR NEXT