ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಂದಾಳತ್ವ ಎನ್ ಡಿ ಎ ದಯನೀಯ ಸೋಲು ಕಂಡ ಹಿನ್ನಲೆಯಲ್ಲಿ ಪಕ್ಷಕ ಹಿರಿಯ ನಾಯಕರು ಸದ್ಯದ ನಾಯಕತ್ವವನ್ನು ಪ್ರಶ್ನಿಸಿರುವ ನಡೆಗೆ ಉತ್ತರಿಸಿರುವ ಪಕ್ಷ, ಯಾವುದೇ ಸೋಲಿಗೆ ಸಾಮೂಹಿಕ ಹೊಣೆ ಹೊರುವ 'ಆರೋಗ್ಯಕರ ಬಳುವಳಿ' ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಅವರಿಂದಲೇ ಬಂದದ್ದು ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ನಾಯಕತ್ವವನ್ನು ಪ್ರಶ್ನಿಸಿದ್ದ ಹಿರಿಯ ಬಿಜೆಪಿ ನಾಯಕರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಯಶವಂಯ್ ಸಿನ್ಹಾ ಅವರ ಟೀಕೆಗೆ ಪ್ರತಿಕ್ರಿಯಿಸುವ ಪಕ್ಷ ನಮ್ಮ ಹಿರಿಯ ನಾಯಕರಿಂದ ಸಲಹೆ ಸೂಚನೆಗಳಿಗೆ ಸ್ವಾಗತ ಎಂದಿದ್ದಾರೆ.
ಈ ಹಿಂದೆ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದ ಈಗಿನ ಕೆಂದ್ರ ಸಂಪುಟ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ ಜಂಟಿ ಹೇಳಿಕೆಯಲ್ಲಿ ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ.
"ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಎಲ್ ಕೆ ಅಡ್ವಾಣಿ ಅವರ ನಾಯಕತ್ವದಲ್ಲಿ ಪಕ್ಷ ದಶಕಗಳವರೆಗೆ ಮುನ್ನಡೆದಿರುವುದು ನಮ್ಮ ಅದೃಷ್ಟ. ಗೆಲುವಾಗಲಿ, ಸೋಲಾಗಲಿ ಸಾಮೂಹಿಕ ಹೊಣೆ ಹೊರುವ ಆರೋಗ್ಯಕರ ಬಳುವಳಿ ಅವರಿಂದಲೇ ಬಂದದ್ದು. ಈ ನಿಟ್ಟಿನಲ್ಲಿ ಅವರ ಸಲಹೆ ಸೂಚನೆಗೆ ಎಂದಿಗೂ ಸ್ವಾಗತ" ಎಂದು ಹೇಳಿಕೆ ತಿಳಿಸಿದೆ.
ಅಲ್ಲದೆ ವಿವಿಧ ಚುನಾವಣೆಗಳಲ್ಲಿ ಪಕ್ಷ ಗೆದ್ದಿರುವುದನ್ನೂ ಈ ಹೇಳಿಕೆಯಲ್ಲಿ ಪಟ್ಟಿ ಮಾಡಲಾಗಿದೆ.
"ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪಕ್ಷ ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಗೆದ್ದಿತು. ಜಾರ್ಖಂಡ, ಹರ್ಯಾಣ, ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲೂ ಪಕ್ಷ ಗೆದ್ದಿತು. ಕರ್ನಾಟಕ, ಮಹಾರಾಷ್ಟ್ರ, ಅಂಡಮಾನ್, ಕೇರಳ ಮತ್ತು ಅಸ್ಸಾಂನ ಪ್ರಾದೇಶಿಕ ಚುನಾವಣೆಗಳನ್ನು ಗೆದ್ದಿದ್ದೇವೆ. ದೆಹಲಿ ಮತ್ತು ಬಿಹಾರ ಚುನಾವಣೆಯ ಫಲಿತಾಂಶ ನಮ್ಮ ವಿರುದ್ಧವಾಗಿದ್ದವು" ಎಂದು ಹೇಳಿಕೆ ತಿಳಿಸಿದೆ.