ಸಿಂಗಾಪುರ: ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಲ್ಲಿನ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿ ಮಾಡಿದ್ದು, 10 ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತ ಮತ್ತು ಸಿಂಗಾಪುರದ ನಡುವೆ ಪ್ರಮುಖವಾಗಿ ರಕ್ಷಣಾ ಕ್ಷೇತ್ರ, ಸೈಬರ್ ಭದ್ರತೆ, ನೌಕಾಯಾನ, ನಾಗರೀಕ ವಿಮಾನಯಾನ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ದೇಶದ ನಾಯಕರು ಸಹಿ ಮಾಡಿದ್ದಾರೆ. ಇದಲ್ಲದೆ ಉಭಯ ನಾಯಕರು ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದು, ಬಾಹ್ಯಾಕಾಶ, ಬಯೋ ಮೆಡಿಸಿನ್ ಮತ್ತು ಆಯುರ್ವೇದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಮತ್ತು ಅಧ್ಯಕ್ಷ ಟೋನಿ ತಾನ್ ಕೆಂಗ್ ಜತೆ ಮಾತುಕತೆ ನಡೆಸಿದ್ದರು.
ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರು, ಭಾರತ ಮತ್ತು ಸಿಂಗಾಪುರ ದೇಶಗಳು ಪರಸ್ಪರ ಸಹಕಾರದೊಂದಿಗೆ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ರಕ್ಷಣೆ ಹಾಗೂ ಭಾಂದವ್ಯ ವೃದ್ಧಿಗೆ ಈ ಒಪ್ಪಂದ ಸಹಾಯಕ ಎಂದು ಜಂಟಿ ಹೇಳಿಕೆ ನೀಡಿದರು. ಇದೇ ವೇಳೆ ಉಭಯ ನಾಯಕರು ಈ ಹಿಂದೆ ಎರಡು ದೇಶಗಳ ನಡುವೆ ಏರ್ಪಟ್ಟಿದ್ದ ಒಪ್ಪಂದಗಳ ಅವಧಿಯನ್ನು ಕೂಡ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತದ ಖಾಯಂ ಸದಸ್ಯ ಸ್ಥಾನ ಬೇಡಿಕೆಗೆ ಸಿಂಗಾಪುರ ಬೆಂಬಲ
ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯುವ ಭಾರತದ ದಶಕಗಳ ಕನಸಿಗೆ ಸಿಂಗಾಪುರ ಬೆಂಬಲ ಘೋಷಣೆ ಮಾಡುವುದಾಗಿ ತಿಳಿಸಿದೆ.