ಬೆಂಗಳೂರು: ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಬೆಂಬಲಿಗರಿಂದ ಚಪ್ಪಾಳೆಗಿಟ್ಟಿಸಿಕೊಂಡು ಬಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಕೂಡ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆದ ಸಂವಾದದಲ್ಲಿಯೂ ಮೋದಿ ವಿರುದ್ಧ ಟೀಕೆ ಮಾಡಿದ್ದು, ಈ ಬಾರಿ ಚಪ್ಪಾಳೆ ಬದಲು ಮುಜುಗರಕ್ಕೊಳಗಾರಿರುವ ಘಟನೆ ನಡೆದಿದೆ.
ಇಂದು ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿಯವರು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ್ದಾರೆ. ಸಂವಾದದಲ್ಲಿ ರಾಹುಲ್ ಮೋದಿಯವರ ವಿರುದ್ಧ ಟೀಕೆ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಬಳಿ ಸ್ವಚ್ಛ ಭಾರತ ಅಭಿಯಾನ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ರಾಹುಲ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಹಾಕಿದ್ದಾರೆ. ಇದಕ್ಕುತ್ತರಿಸಿದ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹೌದು ಉತ್ತಮವಾಗಿ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಕ್ರಿಯೆ ಕಂಡು ವಿಚಲಿತರಾದ ರಾಹುಲ್ ಮತ್ತೆ ಮೇಕ್ ಇನ್ ಇಂಡಿಯಾ ಹಾಗೂ ಸ್ವಚ್ಛ ಭಾರತ ಅಭಿಯಾನ ಮತ್ತಿತರ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಮರುಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು ಮೊದಲಿನಂತೆಯೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಪ್ರತಿಕ್ರಿಯೆ ಕಂಡ ರಾಹುಲ್ ಮತ್ತೆ ಯಾವುದೇ ಪ್ರಶ್ನೆ ಕೇಳದೆ ಮೂಕರಾದರು ಎಂದು ತಿಳಿದುಬಂದಿದೆ.