ತ್ರಿಶೂರ್: ಕೇರಳದ ಜನಪ್ರಿಯ ಸಾಹಿತಿ ಹಾಗೂ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಸಾರಾ ಜೋಸೆಫ್, ಉತ್ತರ ಪ್ರದೇಶದಲ್ಲಿ ಬೀಫ್ ತಿಂದರೆಂದು ಆರೋಪಿಸಿ ಒಬ್ಬನ ಕೊಲೆ ಮಾಡಿದ್ದನ್ನು ವಿರೋಧಿಸಿ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸುವುದಾಗಿ ಶನಿವಾರ ಘೋಷಿಸಿದ್ದಾರೆ.
"ದೇಶ ಈಗ ಕಷ್ಟ ಕಾಲದಲ್ಲಿದೆ. ಇವು ತುರ್ತು ಪರಿಸ್ಥಿತಿಗಿಂತಲೂ ಕರಾಳ ದಿನಗಳು" ಎಂದು ಸಾರಾ ಜೋಸೆಫ್ ಹೇಳಿದ್ದಾರೆ.
ಪ್ರಶಸ್ತಿಯನ್ನು, ಪ್ರಶಸ್ತಿ ಹಣದೊಂದಿಗೆ ಹಿಂದಿರುಗಿಸುವುದಾಗಿ ೨೦೦೩ ರ ಅಕಾಡೆಮಿ ಪ್ರಶಸ್ತಿ ವಿಜೇತೆ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ಕೋಮು ಘರ್ಷಣೆಯ ಬಗ್ಗೆ ವಹಿಸಿರುವ ಸರ್ಕಾರ-ಪ್ರಧಾನಿ ದಿವ್ಯ ಮೌನವನ್ನು ವಿರೋಧಿಸಿ ಉದಯ್ ಪ್ರಕಾಶ್, ನಯನತಾರಾ ಸೈಗಲ್, ಅಶೋಕ್ ವಾಜಪೇಯಿ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
ಅಲ್ಲದೆ ಹಿರಿಯ ಸಾಹಿತಿಗಳಾದ ಶಶಿ ದೇಶಪಾಂಡೆ ಮತ್ತು ಕೆ ಸಚ್ಚಿದಾನಂದ ಅವರು ಕೇಂದ್ರ ಸಾಹಿತ್ಯದ ಸದಸ್ಯ ಮತ್ತು ಇತರ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.