ಮಂಡ್ಯ: ಬೆಂಗಳೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವುದಕ್ಕೂ ಮುನ್ನವೇ ಮಂಡ್ಯದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ.
ಮೈಸೂರು ಮೂಲದ ನಾಲ್ವರು ಯುವಕರ ತಂಡ ವಿದ್ಯಾರ್ಥಿಯೊಬ್ಬಳನ್ನು ಪಾಂಡವಪುರ ತಾಲೂಕಿನ ಬೇಬಿ ಬೆಟ್ಟಕ್ಕೆ ಕರೆದುಕೊಂಡು ಬಂದು ಅತ್ಯಾಚಾರವೆಸಗಿದ್ದಾರೆ. ಕಳೆದ 9 ರಂದು ಮಧ್ಯಾಹ್ನದ ಸಮಯ ಪ್ರಕರಣ ನಡೆದಿದ್ದು, ಅಂದೇ ಆ ಯುವತಿ ಪೊಲೀಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಲು ಪ್ರಯತ್ನಿಸಿದ್ದಳು. ಆದರೆ ಈ ಸಂದರ್ಭದಲ್ಲಿ ಯುವಕರ ತಂಡ ಆಕೆಯ ಮೊಬೈಲ್ ಕಿತ್ತುಕೊಂಡಿತ್ತು. ಬಳಿಕ ಆಕೆ ಅಕ್ಟೋಬರ್ 10 ರಂದು ಪಾಂಡವಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು.
ಸಂತ್ರಸ್ಥೆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ಬಂದಿತರೆಲ್ಲಾ ಮೈಸೂರು ಮೂಲದವರಾಗಿದ್ದು, ಕೀರ್ತಿಗೌಡ, ಕಿರಣ್ ಗೌಡ, ಮೋಹನ್ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಮಂಜು ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಮೂವರು ಮಾತ್ರ ರೇಪ್ ಮಾಡಿದ್ದು, ಮಂಜು ಎಂಬಾತ ಜೊತೆಯಲ್ಲಿ ಹೋಗಿದ್ದ ಎಂದು ಹೇಳಲಾಗಿದೆ. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಗೆ ಮಂಡ್ಯದ ಮಿಮ್ಸ್’ನ ಮಹಿಳಾ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.