ಪ್ರಧಾನ ಸುದ್ದಿ

ಜಗದೀಶ್ ಪ್ಲಾನ್ ಕೈಕೊಟ್ಟಿತೇ?

Srinivasamurthy VN

ಬೆಂಗಳೂರು: ಕೈಯಲ್ಲಿ ಪಿಸ್ತೂಲ್, ನಾಲ್ವರು ಕಾನ್ಸ್‌ಟೇಬಲ್‌ಗಳು ಇದ್ದರೂ ಕಳ್ಳನೊಬ್ಬ ರಾಜಾರೋಷವಾಗಿ ರಿವಾಲ್ವಾರ್ ಹೊಂದಿದ್ದ ಎಸ್ಸೈ ಜಗದೀಶ್ ಅವರಿಗೆ ಚಾಕುವಿನಿಂದ ಇರಿದು  ಹತ್ಯೆಗೈದಿರುವುದು ಆಶ್ಚರ್ಯ ಉಂಟು ಮಾಡಿದೆ.

ಕಳ್ಳನನ್ನು ಹಿಡಿಯಲು ಹೋಗುವುದಕ್ಕೂ ಮೊದಲು ಸೂಕ್ತ ತಯಾರಿ ಹಾಗೂ ಯೋಜನೆ ಮಾಡಿಕೊಂಡಿರಲಿಲ್ಲವಾ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಜಿ ಓಂ ಪ್ರಕಾಶ್, ಕಳ್ಳರು ಇಂತಹ  ಜಾಗದಲ್ಲಿ ಇರುತ್ತಾರೆ ಎನ್ನುವ ಮಾಹಿತಿ ಇರುತ್ತದೆ. ಅದಕ್ಕೆ ಏನು ಬೇಕು ಆ ಬಗ್ಗೆ ಸಂಪೂರ್ಣ ತಯಾರಿ ಮಾಡಿಕೊಂಡು ಪೊಲೀಸರ ತಂಡ ತೆರಳುತ್ತದೆ. ಆದರೆ, ಯಾವುದೇ ನಿರ್ದಿಷ್ಟ ಯೋಜನೆ ಹಾಕಿಕೊಳ್ಳುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ.

ಹೀಗಾಗಿ, ಪ್ಲಾನ್ ಸೂಕ್ತ ರೀತಿಯಲ್ಲಿ ರೂಪಿಸಿರಲಿಲ್ಲ ಎನ್ನುವ ಪ್ರಶ್ನೆ ಬರುವುದಿಲ್ಲ ಎಂದರು. ಎಸ್ಸೈ  ಜಗದೀಶ್ ಅವರು ಕಳ್ಳನ ಹಿಡಿಯಬೇಕು ಎನ್ನುವ ಯೋಜನೆ ಹಾಕಿದ್ದರು. ಆದರೆ, ಆತನನ್ನು ಶೂಟ್ ಮಾಡಬೇಕೆಂದು ಕೊಂಡಿರಲಿಲ್ಲ. ಹೀಗಾಗಿಯೇ ಬೆನ್ನತ್ತಿದ್ದಾರೆ. ಅಲ್ಲದೇ ಅವರಿಗೆ ತಮ್ಮ  ಸಿಬ್ಬಂದಿ ನೆರವು ಇದ್ದ ಕಾರಣ ಗುಂಡು ಹಾರಿಸುವ ಪ್ರಯತ್ನ ಮಾಡಿಲ್ಲ. ಅಲ್ಲದೇ, ಆತನ ಬಳಿ ಚಾಕು ಇರುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ ಎಂದು ಓಂ ಪ್ರಕಾಶ್ ಹೇಳಿದರು.

ವೈಫಲ್ಯ?: ನಾಲ್ವರು ಕಾನ್ಸ್‌ಟೇಬಲ್‌ಗಳು ಬೇರೆ ಬೇರೆ ದಿಕ್ಕಿನಿಂದ ಆರೋಪಿಗಳ ಬಂಧನಕ್ಕೆ ಯತ್ನಿಸಿದ್ದರು. ಆದರೆ, ಎಸ್ಸೈ ಜಗದೀಶ್ ಅವರು ಆರೋಪಿ ಮಧು ಹಾಗೂ ತಂದೆ ಕೃಷ್ಣಪ್ಪನನ್ನು ಅಟ್ಟಿಸಿಕೊಂಡು ಹೋಗುವಾಗ ಉಳಿದ ಕಾನ್ ಟೇಬಲ್‌ಗಳು ಕೂಡಾ ಅದೇ ದಿಕ್ಕಿನಲ್ಲಿ ಓಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎನ್ನುವ ವಾದವೂ ಕೇಳಿ ಬರುತ್ತಿದೆ. ಎಸ್ಸೈ ಜತೆಗೆ ಇನ್ನೊಬ್ಬ ಕಾನ್ಸ್‌ಟೇಬಲ್ ಇದ್ದಿದ್ದರೂ ಕೊಲೆ ನಡೆಯುತ್ತಿರಲಿಲ್ಲ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಇರಿತವಾಗಿದ್ದು ಮತ್ತೊಬ್ಬ ಕಾನ್ಸ್‌ಟೇಬಲ್‌ಗೂ ಚಾಕುವಿನಿಂದ ಇರಿದಿರುವುದರಿಂದ ಆರೋಪಿ ಅತ್ಯಂತ ಆಕ್ರಮಣಕಾರಿಯಾಗಿದ್ದು ಸ್ಪಷ್ಟವಾಗುತ್ತದೆ.

ರಿವಾಲ್ವಾರ್ ಬಳಕೆಯಾಗಲಿಲ್ಲ: ಆರೋಪಿಗಳು ಆಕ್ರಮಣಕಾರಿಯಾಗಿರುವಾಗ, ಪರಾರಿಯಾಗಲೆತ್ನಿಸುವ ಹಾಗೂ ಆತ್ಮರಕ್ಷಣೆಗಾಗಿಯೇ ರಿವಾಲ್ವಾರ್ ನಿಂದ ಗುಂಡು ಹಾರಿಸಬಹುದು. ಹೀಗಾಗಿ, ಜಗದೀಶ್ ಅವರು ಕೂಡಾ ಆರೋಪಿಗಳಿಬ್ಬರು ಸುಮಾರು ಅರ್ಧ ಕಿ ಮೀ ದೂರ ಓಡಿದ್ದ ಕಾರಣ ಕಾಲಿಗೆ ಗುಂಡು ಹಾರಿಸಬಹುದಿತ್ತು. ಆದರೆ ಜಗದೀಶ್ ಅವರು ಯಾವುದೇ ಜಗದೀಶ್ ಅವರು  ಯಾವುದೇ ಗಾಯಗೊಳಿಸದೆ ಅಟ್ಟಿಸಿಕೊಂಡು ಹೋಗಿ ಹಿಡಿಯುವುದರಲ್ಲಿ ಎಡವಿದರಾ ಎನ್ನುವ ಅನುಮಾನವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

SCROLL FOR NEXT