ದೆಹಲಿ: ನರೇಂದ್ರ ಮೋದಿ ಅವರ ಬಜೆಟ್ ಕಡಿತದ ಪರಿಣಾಮವಾಗಿ ದೇಶದಲ್ಲಿನ ಮಕ್ಕಳ ಅಪೌಷ್ಟಿಕತೆ ವಿರುದ್ಧದ ಹೋರಾಟಕ್ಕೆ ಬಲವಾದ ಪೆಟ್ಟು ಬಿದ್ದಿದೆ. ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವೆಯಾಗಿರುವ ಮೇನಕಾ ಗಾಂಧಿ ಅವರೇ ಈಗ ಭ್ರಮನಿರಸನಗೊಂಡು ಮೋದಿ ಆರ್ಥಿಕ ನೀತಿಗಳ ವಿರುದ್ಧ ಟೀಕೆ ಮಾಡಿದ್ದಾರೆ.
ಬಜೆಟ್ ಕಡಿತದ ಪರಿಣಾಮವಾಗಿ ದೇಶದಲ್ಲಿನ ಲಕ್ಷಾಂತರ ಸ್ವಾಸ್ಥ್ಯ ಕಾರ್ಯಕರ್ತರ ತಿಂಗಳ ಸಂಬಳವನ್ನು ಪಾವತಿಸುವುದು ಕೂಡ ಈಗ ಕಷ್ಟಕರವಾಗಿದೆ ಎಂದು ಮೇನಕಾ ಗಾಂಧಿ ಬಹಿರಂಗವಾಗಿ ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮೋದಿ ಸರಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಸಾಮಾಜಿಕ ರಂಗಕ್ಕೆ ಸಲ್ಲಬೇಕಾಗಿರುವ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಸಲುವಾಗಿ ಆ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು
ರಾಜ್ಯ ಸರಕಾರಗಳು ಕೇಂದ್ರದಿಂದ ತಮಗೆ ದೊರಕುವ ಹೆಚ್ಚಿನ ಪ್ರಮಾಣದ ತೆರಿಗೆ ಮೊತ್ತವನ್ನು ಸಾಮಾಜಿಕ ರಂಗದ ಅಭ್ಯುದಯಕ್ಕೆ ಬಳಸಿಕೊಂಡು ಈ ಕೊರತೆಯನ್ನು ನೀಗಿಸುವಂತೆ ಕೋರಿದ್ದರು. ವಿಶ್ವದಲ್ಲೇ ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಕ್ಕಳ ಅಪೌಷ್ಟಿಕತೆಯ ಸಮಸ್ಯೆ ಕಾಡುತ್ತಿದೆ. ವಿಶ್ವದ ಪ್ರತೀ ಅಪೌಷ್ಠಿಕ ಮಕ್ಕಳಲ್ಲಿ ಭಾರತದ ನಾಲ್ಕು ಮಕ್ಕಳಿದ್ದಾರೆ. ಮಾತ್ರವಲ್ಲದೆ ಐದು ವರ್ಷ ದಾಟುವ ಮುನ್ನವೇ ಭಾರತದಲ್ಲಿ ಪ್ರತಿ ವರ್ಷ ಅಪೌಷ್ಟಿಕತೆ ಮತ್ತು ಕಡಿಮೆ ಬೆಳವಣಿಗೆಯಿಂದಾಗಿ 15 ಲಕ್ಷ ಮಕ್ಕಳು ಸಾಯುತ್ತಾರೆ ಎಂದು ಹೇಳಿದ್ದಾರೆ.