ಪ್ರಧಾನ ಸುದ್ದಿ

ಮೋದಿಗೆ ಛೇಡಿಸಿದ ಶಿವಸೇನಾ ಭಿತ್ತಿಚಿತ್ರಗಳನ್ನು ತೆಗೆದುಹಾಕಿದ ಪೊಲೀಸರು

Guruprasad Narayana

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಛೇಡಿಸಿ, ಶಿವಸೇನಾ ಸಂಸ್ಥಾಪಕ ಭಾಳಾ ಸಾಹೇಬ್ ಠಾಕ್ರೆ ಅವರನ್ನು ವೈಭವೀಕರಿಸಿ ಹಾಕಿದ್ದ ಶಿವಸೇನೆಯ ಬೃಹತ್ ಭಿತ್ತಿಚಿತ್ರಗಳನ್ನು ಪೊಲೀಸರು ಬುಧವಾರ ತೆಗೆದುಹಾಕಿದ್ದಾರೆ.

ಮಹಾರಾಷ್ಟ್ರ ಸರ್ಕಾರದಲ್ಲಿ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ಶಿವಸೇನೆಯ ಸಂಬಂಧ ಬಿಗಡಾಯಿಸಿರುವ ಹಿನ್ನಲೆಯಲ್ಲಿ, ಎರಡು ಪಕ್ಷದ ಕಾರ್ಯಕರ್ತರ ನಡುವೆ ಉಂಟಾಗಬಹುದಾದ ಘರ್ಷಣೆಯನ್ನು ತಪ್ಪಿಸಲು ಮುಂಬೈ ಪೊಲೀಸರು ಈ ಹೋರ್ಡಿಂಗ್ ಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ.

ಹಲವಾರು ಚಿತ್ರಗಳ ಕೊಲಾಜ್ ಆಗಿದ್ದ ಈ ಭಿತ್ತಿಚಿತ್ರಗಳಲ್ಲಿ, ಭಾಳ ಠಾಕ್ರೆಯ ಮುಂದೆ ತಲೆಬಾಗಿ ನಿಂತಿರುವ ಮೋದಿ ಚಿತ್ರ ರಾರಾಜಿಸುತ್ತಿತ್ತು. ಅಲ್ಲದೆ "ನಿಮಗೆ ಆ ದಿನಗಳು ಮರೆತುಹೋಗಿವೆಯೇ? ನಿಮ್ಮೆಲ್ಲಾ ಗರ್ವದ ತಲೆಗಳು ಭಾಳಾ ಸಾಹೇಬ್ ಅವರ ಕಾಲಿಗೆ ಬೀಳುತ್ತಿದ್ದ ದಿನಗಳು" ಎಂಬ ಬರಹದೊಂದಿಗೆ ಈ ಹೋರ್ಡಿಂಗ್ ಗಳು ನಗರದ ಮತ್ತು ಹೊರವಲಯದ ಹಲವಾರು ಪ್ರದೇಶಗಳಲ್ಲಿ ರಾರಾಜಿಸುತ್ತಿದ್ದವು.

ಇತರ ಬಿಜೆಪಿ ನಾಯಕರು ಠಾಕ್ರೆ ಮುಂದೆ ತಲೆಬಾಗಿರುವುದು ಅಥವಾ ಅವರಿಗೆ ಹಾರೈಸುತ್ತಿರುವ ಚಿತ್ರಗಳನ್ನು ಹೊಂದಿದ್ದವು. ಅವುಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಚಿತ್ರಗಳನ್ನೂ ಹೊಂದಿದ್ದವು.

ಬಿಜೆಪಿ ನಾಯಕರಲ್ಲದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಎಂ ಎನ್ ಎಸ ಅಧ್ಯಕ್ಷ ರಾಜ್ ಠಾಕ್ರೆ ಕೂಡ ಬಾಳಸಾಹೇಬ್ ಗೆ ಗೌರವ ತೋರಿಸುತ್ತಿರುವಂತೆ ಬಿಂಬಿಸಲಾಗಿತ್ತು.

SCROLL FOR NEXT