ಬೆಂಗಳೂರು: ಒಂದಂಕಿ ಲಾಟರಿ ಹಗರಣದ ಕಿಂಗ್ ಪಿನ್ ರಾಜನ್ ಅಲಿಯಾಸ್ ಪಾರಿರಾಜ ನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಲಾಟರಿ ಹಗರಣದಲ್ಲಿ ಈಗಾಗಲೇ ಪೊಲೀಸರು ಚಾರ್ಜ್‍ಶೀಟ್ ದಾಖಲು ಮಾಡಿದ ಹಿನ್ನೆಲೆಯಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಕೋರಿ ಪಾರಿರಾಜನ್ ಹೈಕೋರ್ಟ್ ಮೆಟ್ಟಿಲೇರಿದ್ದನು. ವಿಚಾರಣೆ ನಡೆಸಿದ ನ್ಯಾ.ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕ ಸದಸ್ಯ ಪೀಠ , ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆಂಬ ಆರೋಪವಿದ್ದು, ಸತ್ಯಾನುಸತ್ಯತೆ ಅರಿಯಲು ಸಂಪೂರ್ಣ ತನಿಖೆಯ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟು ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿದೆ.
ವಿಚಾರಣೆ ವೇಳೆ ಸಿಬಿಐ ಪರ ಹಿರಿಯ ವಕೀಲರಾದ ಸಿ.ಎಚ್. ಜಾಧವ್ ವಾದ ಮಂಡಿಸಿ, ಈ ಲಾಟರಿ ದಂಧೆಯಲ್ಲಿ ಲಾಟರಿ ನಿಷೇಧ ದಳ ಹಾಗೂ ಉನ್ನತ ಮಟ್ಟದ ಸಾರ್ವಜನಿಕ ಅಧಿಕಾರಿಗಳು ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಕೇಳಿಬಂದಿದೆ. ಅರ್ಜಿದಾರನ ವಿರುದ್ಧ ಗಂಭೀರ ಆರೋಪವಿದ್ದು, ಆ ಆರೋಪಗಳು ಆರೋಪ ಪಟ್ಟಿಯಲ್ಲೂ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಬೇರೆ ಯಾವೆಲ್ಲಾ ಆರೋಪಿಗಳು ಭಾಗಿಯಾಗಿದ್ದಾರೆಂದು ಕಂಡುಹಿಡಿಯ ಬೇಕಿದೆ.
ಸಿಬಿಐ ಈ ಪ್ರಕರಣದ ತನಿಖೆಯನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಲಿದ್ದು, ಈ ಹಂತ ದಲ್ಲಿ ಈತನಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆಯಿದ್ದು ಆರೋಪಿ ತನಿಖೆಗೆ ಸಹಕರಿಸದೆ ವಿಚಾರಣೆಯಿಂದ ಪಾರಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಪ್ರಕರಣದ ಗಂಭೀರತೆ ಎಷ್ಟರ ಮಟ್ಟಿಗೆ ಇದೆ ಎಂದರೆ ರಾಜ್ಯ ಸರ್ಕಾರ ಈ ಹಗರಣವನ್ನು ಹಿಂದೆ ಸಿಐಡಿಗೆ ಒಪ್ಪಿಸಿತ್ತು.