ಪ್ರಧಾನ ಸುದ್ದಿ

ಮೇಯರ್ ಚುನಾವಣೆಗೆ ಮತ್ತೊಂದು ಅಡ್ಡಿ

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯ ಮತದಾರರ ಪಟ್ಟಿ ಗೊಂದಲ ಕುರಿತು ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಂದ ತುರ್ತಾಗಿ ಸ್ಪಷ್ಟನೆ ಕೇಳಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ಸೆ.11ರ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲಿರುವಮತದಾರರಬಗ್ಗೆಆಕ್ಷೇಪಗಳು ಸಲ್ಲಿಕೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಸೂಚಿಸಿದ್ದಾರೆ. ಇದು ಮೇಯರ್ ಮತದಾನವನ್ನು ಮತ್ತಷ್ಟು ಗೋಜಲಾಗಿಸಿದೆ.

ಅಧಿಕೃತ ಪಟ್ಟಿಯಲ್ಲಿ ಅನಧಿಕೃತರು:
ಮೇಯರ್ ಚುನಾವಣೆಯಲ್ಲಿ ಯಾರೆಲ್ಲಾ ಮತದಾನ ಮಾಡಬಹುದು ಎಂಬ ಗೊಂದಲ ಎದ್ದಿದ್ದ ಹಿನ್ನೆಲೆಯಲ್ಲಿ ಮತದಾರರ ನೋಂದಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಕುಮಾರನಾಯಕ್ ಇತ್ತೀಚಿಗೆ 260 ಮಂದಿ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದರು.

ಆದರೆ, `ಇದರಲ್ಲಿ ಅನರ್ಹರೂ ಸೇರಿಕೊಂಡಿದ್ದಾರೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಪಟ್ಟಿಯಲ್ಲಿದ್ದಾರೆ. ಇದರಿಂದ ಚುನಾವಣೆ ನ್ಯಾಯ ಸಮ್ಮತವಾಗಿ
ನಡೆಯುವುದಕ್ಕೆ ಸಾಧ್ಯವಿಲ್ಲ' ಎಂದು ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ ಹಾಗೂ ಪಕ್ಷೇತರರಾದ ರಘು ಆಚಾರ್ ವಿರುದ್ಧ ಬಿಜೆಪಿ ಮುಖಂಡರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ಬಿಜೆಪಿಯ ಜಗ್ಗೇಶ್ ಹಾಗೂ ಡಿ.ಎಸ್. ವೀರಯ್ಯ ವಿರುದ್ಧ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು, ಬಿಬಿಎಂಪಿ ಆಯುಕ್ತರಿಗೆ ಮತ್ತು ಬೇರೆ ಜಿಲ್ಲೆಗಳ ಮತದಾರ ಪಟ್ಟಿಯಲ್ಲಿದ್ದಾರೆ ಎಂಬ ದೂರು ಬಂದಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬುಧವಾರ ಪತ್ರ ಬರೆದಿದ್ದಾರೆ.

ಈಗಾಗಲೇ ಘೋಷಣೆಯಾಗಿರುವ ಮತದಾರರ ಪಟ್ಟಿಯಲ್ಲಿರುವವರು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ: ಜಯಂತಿ ಅವರು ಬಿಬಿಎಂಪಿ ಮೇಯರ್ ಚುನಾವಣೆ ನಡೆಸುವ ಚುನಾವಣಾಧಿಕಾರಿ ಯಾಗಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ನೀಡುವ ಮತದಾರರ ಪಟ್ಟಿಯನ್ನಾಧರಿಸಿ ಚುನಾವಣೆ ನಡೆಸುತ್ತಾರೆ. ಆದ್ದರಿಂದ ಮತದಾರರಪಟ್ಟಿಯಲ್ಲಿರುವ ದೋಷಗಳನ್ನು ಸಂಬಂಧಿಸಿದ ಮತದಾರರ ಪಟ್ಟಿ ಸಿದ್ಧಪಡಿಸುವ ಚುನಾವಣಾಧಿಕಾರಿಗಳೇ ಸರಿಪಡಿಸಬೇಕು. ಹೀಗಾಗಿ ಜಿಲ್ಲಾಧಿಕಾರಿಗಳು ಸೆ.10 ಒಳಗಾಗಿ ಮತದಾರರ ಪಟ್ಟಿಯಲ್ಲಿ ಯಾರೆಲ್ಲಾ ಅರ್ಹರಿದ್ದಾರೆ.

ಅನರ್ಹರಿದ್ದಾರೆ ಎಂದು ಕಾನೂನಿನ ಪ್ರಕಾರ ತೀರ್ಮಾನಿಸಿ ವರದಿ ಸಲ್ಲಿಸಲಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆಗೆ ಹಸಿರು ನಿಶಾನೆ ತೋರಿರುವ ಹೈಕೋರ್ಟ್, ಫಲಿತಾಂಶವನ್ನು ಅಂತಿಮ ತೀರ್ಪಿಗೆ ಒಳಪಡಿಸಿದೆ. ಈ ಮಧ್ಯೆ, ಆಯುಕ್ತರ ಈ ಕ್ರಮ ಮತ್ತೊಂದು ಕೊಕ್ಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

SCROLL FOR NEXT