ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗಳು ಅನುಷ್ಠಾನಕ್ಕೆ ಒತ್ತಾಯಿಸಿ
ಸ್ಯಾಂಡಲ್‌ವುಡ್ ನ ನಟ-ನಟಿಯರು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದು, ಬಳಿಕ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿವರಾಜ್ ಕುಮಾರ್: ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ. ನಾವು ನಮ್ಮ ನೀರನ್ನು ಕೇಳಿದ್ದೇವೆ, ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ಕಷ್ಟ ಬಂದಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಒಗ್ಗಟ್ಟಾಗಿ ಎದುರಿಸಬೇಕು ರೈತರು ಧೈರ್ಯವಾಗಿರಬೇಕು. ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ. ರೈತರ ಹೋರಾಟಕ್ಕೆ ಎಲ್ಲಿಗೆ ಬೇಕಾದರೂ ನಾವು ಬರಲು ಸಿದ್ಧ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. ನಮ್ಮೆಲ್ಲರ ಕೂಗು ಭಾರತಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಕೇಳಬೇಕು. ನಾವು ನಮ್ಮ ನೀರನ್ನು ಕೇಳಿದ್ದೇವೆ, ಪಾಕಿಸ್ತಾನದ ನೀರಲ್ಲ. ತಮಿಳುನಾಡಿಗೆ ನಾವು ಕಾವೇರಿ ನೀರು ಕೊಟ್ಟಿದ್ದೇವೆ. ನಮ್ಮ ಪಾಲಿನ ನೀರು ನಮಗೆ ಕೊಡಲಿ ಎಂದು ಶಿವರಾಜ್ ಕುಮಾರ್ ಗುಡುಗಿದ್ದಾರೆ.
ರವಿಚಂದ್ರನ್: ನಿಮ್ಮ ಸಮಸ್ಯೆಗೆ ಚಿತ್ರರಂಗ ಒಗ್ಗಟ್ಟಾಗಿ ಬಂದಿದೆ. ನಿಮ್ಮ ಪ್ರೀತಿ, ಅಭಿಮಾನವೇ ನಮ್ಮನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಮ್ಮ ನೋವು ಎಲ್ಲಿಗೆ ತಲುಪಬೇಕು ಅಲ್ಲಿಗೆ ಹೋಗಬೇಕು. ನಿಮ್ಮ ಕಷ್ಟ-ಸುಖಗಳಿಗೆ ಚಿತ್ರರಂಗ ಸದಾ ಇದ್ದೇ ಇರುತ್ತೆ.
ಉಪೇಂದ್ರ: ನಮ್ಮ ದೇಶ ವಿಶ್ವಕ್ಕೆ ಕೊಡೋದನ್ನು ಕಲಿಸಿದೆ. ಇಲ್ಲಿ ರೈತರು ಕಷ್ಟದಲ್ಲಿದ್ದಾರೆ ನಮ್ಮ ನೀರು ನಮಗೆ ಕೊಡಿ. ನಿಮ್ಮೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತೆ.
ಪುನೀತ್ ರಾಜ್ ಕುಮಾರ್: ನಾವೆಲ್ಲ ಭಾರತೀಯರು,ಕರ್ನಾಟಕಕ್ಕೆ ಸಮಸ್ಯೆ ಬಂದರೆ ನಾವೆಲ್ಲ ಒಂದಾಗಬೇಕು. ನಿಮ್ಮ ಸಮಸ್ಯೆಗೆ ನಮ್ಮ ಬೆಂಬಲ ಸದಾ ಇರುತ್ತೆ. ಕೇಂದ್ರ-ರಾಜ್ಯ ಸರ್ಕಾರಗಳು ಸಮಸ್ಯೆ ಬಗೆಹರಿಸಬೇಕು ಎಂದು ಪುನೀತ್ ಆಗ್ರಹಿಸಿದ್ದಾರೆ.
ದುನಿಯಾ ವಿಜಿ: ಉತ್ತರ ಕರ್ನಾಟಕ ಜನರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ಯುವಕರು ಗೋವಾಕ್ಕೆ ಪ್ರವಾಸ ಹೋಗುವುದನ್ನು ನಿಲ್ಲಿಸಿ, ಗೋವಾಕ್ಕೆ ತೆರಳುವ ವಾಹನಗಳನ್ನು ನಿಲ್ಲಿಸಿ. ಗೋವಾ ಸರ್ಕಾರಕ್ಕೆ ಆಗ ಪ್ರತಿಭಟನೆ ಬಿಸಿ ತಟ್ಟುತ್ತೆ .
ದರ್ಶನ್: ನೀರು ಕೊಟ್ಟರೆ ಮೆದು ರೊಟ್ಟಿ ಕೊಡೋಣ. ನೀರು ಕೊಡದೇ ಇದ್ದರೆ ಖಡಕ್ ರೊಟ್ಟಿಯೇ ಕೊಟ್ಟು ಬಿಡೋಣ. ನಿಮ್ಮೆಲ್ಲರ ಹೋರಾಟಕ್ಕೆ ನಾವೆಲ್ಲ ಇರುತ್ತೇವೆ.
ರಂಗಾಯಣ ರಘು: ಸಾಲ ಮಾಡಿ, ಆದರೆ, ಸಾಲಕ್ಕಾಗಿ ಸಾಯಬೇಡಿ. ಮಳೆ, ಬೆಳೆ ಚೆನ್ನಾಗಿ ಬಂದ ಮೇಲೆ ಸಾಲ ತೀರಿಸಿ . ನಮಗೆ ನ್ಯಾಯ ಬೇಕು, ಕುಡಿಯುವ ನೀರೂ ಬೇಕು.
ಜಯಮಾಲ: ನಿಮ್ಮೆಲ್ಲರ ಇಚ್ಛಾಶಕ್ತಿ ಹೀಗೆ ಇರಲಿ, ಯೋಜನೆ ಜಾರಿಯಾಗುತ್ತೆ. ರಾಜಕೀಯದ ರಹಿತವಾಗಿ ಸಮಸ್ಯೆ ಪರಿಹರಿಸಲಿ. ಇಂದಿರಾಗಾಂಧಿ, ವಾಜಪೇಯಿ ಜಲ ವಿವಾದ ಬಗೆಹರಿಸಿದ್ದರು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಲಿ.
ದೊಡ್ಡಣ್ಣ: 1962ರಲ್ಲಿ ಪ್ರವಾಹ ಪೀಡಿತರ ನೆರವಿಗೆ ಚಿತ್ರರಂಗ ಬಂದಿತ್ತು. ಅಂದು ರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗ ನೆರವಾಗಿತ್ತು. ಬಳಿಕ ಗೋಕಾಕ್ ಚಳವಳಿಯಲ್ಲಿ ಮತ್ತೆ ಚಿತ್ರರಂಗ ಭಾಗಿಯಾಗಿತ್ತು. ರಾಜ್ಕುಮಾರ್ ನೇತೃತ್ವದಲ್ಲಿ ಹೋರಾಟ ಯಶಸ್ವಿಯಾಗಿತ್ತು. ಈಗ ಕಳಸಾ-ಬಂಡೂರಿ ಹೋರಾಟಕ್ಕೆ ಚಿತ್ರರಂಗ ಬಂದಿದೆ. ಯೋಜನೆ ಜಾರಿವರೆಗೂ ಚಿತ್ರರಂಗ ನಿಮ್ಮ ಜೊತೆ ಇರುತ್ತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics