ಹುಬ್ಬಳ್ಳಿ: ಹಿರಿಯ ಸಂಶೋಧಕ ಡಾ.ಎಂಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆಗೈದವರ ಸುಳಿವು ನೀಡಿದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಹಂತಕರ ಸುಳಿವು ಸರ್ಕಾರಕ್ಕೆ ಲಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೆ. 16ರಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ವಿಚಾರವಾದಿಗಳು, ಮಠಾಧೀಶರು ಮತ್ತು ಹಂತಕರ ಗುಂಡಿಗೆ ಬಲಿಯಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ಡಾ. ಕಲಬುರ್ಗಿ ಕುಟುಂಬದ ಸದಸ್ಯರ ಕೋರಿಕೆಯಂತೆ ಮುಖ್ಯಮಂತ್ರಿಗಳು ಐದು ಲಕ್ಷ ರುಪಾಯಿ ನಗದು ಬಹುಮಾ ನ ಘೋಷಿಸಿದ್ದರು. ಮರುದಿನವೇ ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಸಿಐಡಿಯ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಹಂತಕರ ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
`ಹಂತಕರ ಯಾವುದೇ ಸುಳಿವು ಲಭಿಸಿಲ್ಲ' ಎಂದು ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿ ಕೈಚೆಲ್ಲಿ ಕುಳಿತಿದ್ದ ಸಿಐಡಿಗೆ ಈ ಸುಳಿವು ಸಂಚಲನ ಮೂಡಿಸಿದೆ. ಹೀಗಾಗಿ ತನಿಖೆಗೆ ಮತ್ತಷ್ಟು ಚುರುಕು ಬಂದಿದೆ. ಇದಕ್ಕಾಗಿ ಸಿಐಡಿ ಡಿಐಜಿ ಹೇಮಂತ್ ನಿಂಬಾಳ್ಕರ್, ಇನಸ್ಪೆಕ್ಟರ್ ಎನ್.ವಿ. ಬರ್ಮನಿ, ಗುಪ್ತದಳ ಇಲಾ ಖೆಯ ಡಿವೈಎಸ್‍ಪಿ ಎ.ಎಸ್. ಬಡಿಗೇರ್ ಅವರ ನೆರವನ್ನೂ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಅನುಭವಸ್ಥ ಅಧಿಕಾರಿಗಳು
ಹೇಮಂತ್ ನಿಂಬಾಳ್ಕರ್ ಮೂಲತಃ ಬೆಳಗಾವಿ ಗಡಿ ಭಾಗದವರು. ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರಾಗಿ ಕೆಲಸ ಮಾಡಿದವರು. ಮಹಾರಾಷ್ಟ್ರಕರ್ನಾಟಕ ಅಂತಾರಾಜ್ಯ ಕ್ರಿಮಿನಲ್‍ಗಳ ಬಗ್ಗೆ ಆಳವಾಗಿ ಅರಿತವರು. ಎನ್.ವಿ. ಬರ್ಮನಿ ಬೆಳಗಾವಿಯಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಸಿಐಡಿ ಇನ್‍ಸ್ಪೆಕ್ಟರ್ ಆಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಗುಪ್ತದಳ ಡಿವೈಎಸ್‍ಪಿ ಆಗಿರುವ ಎ.ಎಸ್. ಬಡಿಗೇರ ಹಿಂದೆ ಹುಬ್ಬಳ್ಳಿಧಾರವಾಡ ಪೊಲೀಸ್ ಕಮೀಷ್ನರೇಟ್‍ನಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದ್ದರು. ಈ ಮೂವರನ್ನು ಈಗ ಡಾ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಪಿ ರಾಜಪ್ಪ ನೇತೃತ್ವದ ಸಿಐಡಿ ತಂಡದ ನೆರವಿಗೆ ಸರ್ಕಾರ ಕಳುಹಿಸಿದೆ. ಬರ್ಮನಿ ನೇತೃತ್ವದ ತಂಡ ಕೊಲ್ಲಾಪುರದಲ್ಲಿ ಠಿಕಾಣಿ ಹೂಡಿದ್ದರೆ, ಬಡಿಗೇರ ಧಾರವಾಡದ ಮೂಲೆ ಮೂಲೆಗಳನ್ನು ಶೋಧಿಸುತ್ತಿದ್ದಾರೆ.