ನವದೆಹಲಿ: ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿ ಐ ಐ) ಮುಖ್ಯಸ್ಥನಾಗಿ ನಟ ಗಜೇಂದ್ರ ಚೌಹಾನ್ ನೇಮಕಾತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.
ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಎಫ್ ಟಿ ಐ ಐ ಗೆ ಸಹ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ ಎಂದು ಹೇಳಲಾಗಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಾಹಿತಿ ಮತ್ತು ಪ್ರಸಾರ ಖಾತೆ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಚರ್ಚಿಸುತ್ತಿದ್ದು, ಗಜೇಂದ್ರ ಚೌಹಾನ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಉಳಿಸಿ, ಸಹ ಅಧ್ಯಕ್ಷರ ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಕೆಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಸರ್ಕಾರ ಮತ್ತೊಂದು ಪರಿಹಾರವನ್ನೂ ಮುಂದಿಟ್ಟಿದ್ದೂ, ವಿದ್ಯಾರ್ಥಿಗಳ ವಿರೋಧ ಎದುರಿಸುತ್ತಿರುವ ಎಫ್ ಟಿ ಐ ಐ ಆಡಳಿತ ಮಂಡಳಿಯಲ್ಲಿರುವ 5 ಸದಸ್ಯರನ್ನು ವಜಾಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಚೌಹಾನ್ ಅವರ ಸ್ಥಾನಕ್ಕೆ ಕುತ್ತು ಬಾರದಂತೆ ಕೇಂದ್ರ ಸರ್ಕಾರ ಎಫ್ ಟಿ ಐ ಐ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯೋಜನೆ ರೂಪಿಸಿದೆ.