ಇಸ್ಲಾಮಾಬಾದ್: ಭಾರತೀಯ ಬೇಹುಗಾರಿಕಾ ವ್ಯಕ್ತಿ ಎಂದು ಆರೋಪಿಸಿ ಸೆರೆಹಿಡಿದಿರುವ ಭಾರತೀಯ ಮಾಜಿ ನೌಕಾದಳದ ಅಧಿಕಾರಿಯ ಮೇಲೆ ವಿಧ್ವಂಸಕ ಮತ್ತು ಭಯೋತ್ಪಾದಕ ಕೃತ್ಯ ನಡೆಸುವ ಸಂಚಿನ ಆರೋಪಗಳನ್ನು ಪಾಕಿಸ್ತಾನ ಹೊರಿಸಿದೆ ಎಂದು ಮಂಗಳವಾರ ದಿನಪತ್ರಿಕೆಯೊಂದು ವರದಿ ಮಾಡಿದೆ.
ರಿಸರ್ಚ್ ಅಂಡ್ ಅನಲಿಸಿಸ್ ವಿಂಗ್ (ಆರ್ ಎ ಡಬ್ಲ್ಯು) ಏಜೆಂಟ್ ಎಂದು ಆರೋಪಿಸಿ ಕಳೆದ ತಿಂಗಳು ಬಲೋಚಿಸ್ಥಾನದಲ್ಲಿ ಬಂಧನಗೊಂಡ ಕುಲಭೂಷಣ್ ಜಾಧವ್ ಅವರ ಮೇಲೆ ಕ್ವೆಟ್ಟಾದ ಭಯೋತ್ಪಾದನ ವಿರೋಧಿ ಇಲಾಖೆ ಪ್ರಕರಣ ದಾಖಲಿಸಿದೆ.
ಬಲೋಚಿಸ್ಥಾನದ ಗೃಹ ಇಲಾಖೆಯ ನಿರ್ದೇಶನದ ಮೇರೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
"ಭಯೋತ್ಪಾದನೆ, ವಿದೇಶಿ ನೀತಿ ಉಲ್ಲಂಘನೆ ಮತ್ತು ವಿಧ್ವಂಸಕ ಕೃತ್ಯ ನಡೆಸುವ ಸಂಚಿನ ಆರೋಪಗಳನ್ನು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ" ಎಂದು ಪೋಲಿಸ್ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಲಾಗಿದೆ.
ಜಾಧವ್ ಈ ಹಿಂದೆ ನೌಕಾದಳದಲ್ಲಿ ಕೆಲಸ ಮಾಡಿದ್ದರು ಎಂದು ಒಪ್ಪಿಕೊಂಡಿರುವ ಭಾರತ ಆರ್ ಎ ಡಬ್ಲ್ಯು ಏಜೆಂಟ್ ಎಂಬ ವರದಿಯನ್ನು ಅಲ್ಲಗೆಳೆದಿದೆ.
ಇಸ್ಲಾಮಾಬಾದ್ ಪ್ರಕಾರ ಇರಾನ್ ನಲ್ಲಿ ವಾಸಿಸುತ್ತಿದ್ದ ಜಾಧವ್ ಆಗ್ಗಾಗ್ಗೆ ಪಾಕಿಸ್ತಾನ ಮತ್ತು ಬಲೋಚಿಸ್ಥಾನ ಪ್ರಾಂತ್ಯಕ್ಕೆ ಭೇಟಿ ನೀಡುತ್ತಿದ್ದರು ಎಂದಿದೆ.