ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ, ಬುಧವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದೆ.
ಲೋಕೋಪಯೋಗಿ ಇಲಾಖೆ ಜೆಇ ಕೆ.ಎಸ್. ರಂಗನಾಥ್, ರಿಯಲ್ ಎಸ್ಟೇಟ್ ಉದ್ಯಮಿ ಬಿ.ಅನಿಲ್ ಕುಮಾರ್ ಹಾಗೂ ಟ್ಯುಟೋರಿಯಲ್ಸ್ ಮಾಲೀಕ ಕೆ.ಎಂ. ಮುರಳೀಧರ್ ಅವರನ್ನು ಸಿಐಡಿ ಪೊಲೀಸರು ಇಂದು ವಶಕ್ಕೆ ಪಡೆದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದೆ.
ಪ್ರಶ್ನೆ ಪತ್ರಿಕೆ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಈ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ಶಿವಕುಮಾರಸ್ವಾಮಿ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಯಲ್ಲಿ ಟ್ಯುಟೋರಿಯಲ್ಸ್ ಮಾಲೀಕ ಮುರಳೀಧರ್, ಕಿಂಗ್ ಪಿನ್ ಶಿವಕುಮಾರಸ್ವಾಮಿಗೆ ಸಹಕರಿಸಿದ್ದು, ಪ್ರಶ್ನೆ ಪತ್ರಿಕೆ ತಂದು, ಅದನ್ನು ಬಗೆಹರಿಸಿ ಬಳಿಕ ಉತ್ತರ ಸಮೇತ ಮಾರಾಟ ಮಾಡುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ,
ಪ್ರಕರಣ ಸಂಬಂಧ ಸಿಐಡಿ ಸಚಿವರೊಬ್ಬರ ವಿಶೇಷ ಅಧಿಕಾರಿ ಸೇರಿದಂತೆ ಇದುವರೆಗೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಶಿವಕುಮಾರಸ್ವಾಮಿಗಾಗಿ ತೀವ್ರ ಶೋಧ ನಡೆಸುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯು ಹಲವು ವರ್ಷಗಳಿಂದ ನಡೆಯುತ್ತಿದ್ದು, ಅದರಲ್ಲಿ ಹಲವು ಟ್ಯೂಟೋರಿಯಲ್‌ಗಳು ಹಾಗೂ ಶಿಕ್ಷಕರು ಭಾಗಿಯಾಗಿರುವ ಮಾಹಿತಿ ದೊರೆತಿದೆ, ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಸಿಐಡಿ, ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.