ನವದೆಹಲಿ: ವಿದೇಶಗಳಲ್ಲಿ ನೀವು ಮತ್ತು ನಿಮ್ಮ ಪತ್ನಿ, ಮಕ್ಕಳು ಹೊಂದಿರುವ ಎಲ್ಲಾ ಆಸ್ತಿಯ ವಿವರವನ್ನು ಬಹಿರಂಗಪಡಿಸುವಂತೆ ಸಾಲದ ದೊರೆ ವಿಜಯ್ ಮಲ್ಯ ಅವರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ವಿದೇಶದಲ್ಲಿ ಹೊಂದಿರುವ ಆಸ್ತಿಯ ವಿವರವನ್ನು ಬಹಿರಂಗಪಡಿಸುತ್ತಿಲ್ಲ ಎಂದು ಬ್ಯಾಂಕ್ ಗಳು ನಿನ್ನೆ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದವು. ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್ ಎಲ್ಲಾ ಆಸ್ತಿ ವಿವರ ಬಹಿರಂಗಪಡಿಸುವಂತೆ ಮದ್ಯದ ದೊರೆಗೆ ಸೂಚಿಸಿದೆ.
ಈ ವೇಳೆ ವಿಜಯ್ ಮಲ್ಯ ಅವರು ಬ್ಯಾಂಕ್ ಗಳಿಗೆ ನೀಡಿದ ವೈಯಕ್ತಿಕ ಜಾಮೀನಿನಡಿ ಅವರ ಪತ್ನಿ ಹಾಗೂ ಪುತ್ರ ಹೊಂದಿರುವ ಆಸ್ತಿಯವನ್ನು ವಶಕ್ಕೆ ಪಡೆಯಲು ಬರುವುದಿಲ್ಲ ಎಂದು ವಾದಿಸಿದ ಹಿರಿಯ ವಕೀಲ ಸಿ.ಎ. ವೈದ್ಯನಾಥನ್ ಅವರ ಹೇಳಿಕೆಯನ್ನು ದಾಖಲಿಸಲಾಯಿತು.
ವಿಜಯ್ ಮಲ್ಯ ಅವರು ಒಟ್ಟು 17 ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದಿದ್ದು, ಸಾಲ ಮರುಪಾವತಿಸದೇ ಈಗ ವಿದೇಶಕ್ಕೆ ಪರಾರಿಯಾಗಿದ್ದಾರೆ.