ಕಾನ್ಪುರ: ಪೊಲೀಸ್ ವಶದಲ್ಲಿ ಮೃತಪಟ್ಟ 26 ವರ್ಷದ ದಲಿತ ಯುವಕನ ಸಾವಿನ ಬಗ್ಗೆ ಸಿಬಿಐ ತನಿಖೆಗಾಗಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪಿ ಎಲ್ ಪುನಿಯಾ ಇಂದು ಆಗ್ರಹಿಸಿದ್ದಾರೆ.
ಸಂಶಯಾತ್ಮಕ ಸನ್ನಿವೇಶದಲ್ಲಿ ಗುರುವಾರ ಅಹಿರ್ವಾನಿ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಕಮಲ್ ವಾಲ್ಮೀಕಿ ಕುಟುಂಬವನ್ನು ಪುನಿಯಾ ಭೇಟಿ ಮಾಡಿದ್ದಾರೆ. ಕಳ್ಳತನದ ಆರೋಪದಲ್ಲಿ ರಾಜು ಮಿಸ್ತ್ರಿ ಎಂಬುವವರ ಜೊತೆಗೆ ಪೊಲೀಸರು ಕಮಲ್ ನನ್ನು ಬಂಧಿಸಿದ್ದರು.
"ಪೊಲೀಸರು ಕಮಲ್ ಗೆ ಸ್ಟೀಲ್ ರಾಡ್ ನಿಂದ ಹೊಡೆದರು ಮತ್ತು ವಿದ್ಯುಚ್ಛಕ್ತಿ ಶಾಕ್ ನೀಡಿದರು ಎಂದು ಅವರ ಕುಟುಂಬ ಆರೋಪಿಸಿದೆ. ಅವರು ಸತ್ತ ಮೇಲೆ ಮೃತ ದೇಹವನ್ನು ನೇಣಿಗೆ ಬಿಗಿದಿ ಆತ್ಮಹತ್ಯೆ ಎಂದು ತೋರಿಸಿದ್ದಾರೆ" ಎಂದು ಕಮಲ್ ಕುಟುಂಬವನ್ನು ಭೇಟಿ ಮಾಡಿದ ನಂತರ ಪುನಿಯಾ ಹೇಳಿದ್ದಾರೆ.
ಹೆಚ್ಚು ದೈಹಿಕ ಕಿರುಕುಳದಿಂದ ಪುನಿಯಾ ಮೃತಪಟ್ಟಿರುವುದಾಗಿ ಶವಪರೀಕ್ಷೆ ಕೂಡ ಹೇಳುತ್ತದೆ ಎಂದು ಕೂಡ ಪುನಿಯಾ ಹೇಳಿದ್ದಾರೆ.
ಈ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ವಜಾಗೊಂಡಿರುವ ಪೊಲೀಸರನ್ನು ಕೊಲೆಯ ಆರೋಪದ ಮೇಲೆ ಬಂಧಿಸಬೇಕು ಎಂದು ಕಮಲ್ ಕುಟುಂಬ ಆಗ್ರಹಿಸಿರುವುದಾಗಿ ಅವರು ತಿಳಿಸಿದ್ದಾರೆ.
"ಸಣ್ಣ ಗುಡಿಸಿಲಿನಲ್ಲಿ ಕಮಲ್ ಕುಟುಂಬ ವಾಸವಿದೆ. ಅಕಸ್ಮಾತ್ ಅವರು ಕಳ್ಳನಾಗಿದ್ದರೆ ಅವರ ಮನೆಯಾದರೂ ಉತ್ತಮ ಸ್ಥಿತಿಯಲ್ಲಿರಬೇಕಿತ್ತು" ಎಂದು ತಿಳಿಸುವ ಪುನಿಯಾ ಕಮಲ್ ಡಕಾಯಿತ ಎಂಬ ಪೋಲೀಸರ ವಾದವನ್ನು ತಳ್ಳಿಹಾಕಿದ್ದಾರೆ. ಹಾಗೆಯೇ ಕಮಲ್ ಕುಟುಂಬಕ್ಕೆ ರಾಜ್ಯ ಸರ್ಕಾಯರ ಧನ ಸಹಾಯ ಮಾಡಿ, ಕನಿಷ್ಠ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ಕೊಟ್ಟು ಮನೆ ನೀಡಬೇಕೆಂದು ಕೂಡ ಅವರು ಆಗ್ರಹಿಸಿದ್ದಾರೆ.
ಠಾಣೆ ಉಸ್ತುವಾರಿ ಜೀವನ್ ರಾಮ್ ಯಾದವ್ ಅವರನ್ನು ಒಳಗೊಂಡಂತೆ ಈ ಪ್ರಕರಣದಲ್ಲಿ ಮೂವರು ಅಧಿಕಾರಿಗಳನ್ನು ಸೇವಿಯಿಂದ ವಜಾಗೊಳಿಸಲಾಗಿದೆ ಮತ್ತು ಈಗ ವಜಾಗೊಂಡಿರುವ ಪೊಲೀಸರ ಸಂಖ್ಯೆ ಈ ಪ್ರಕರಣದಲ್ಲಿ 15 ಕ್ಕೆ ಏರಿದೆ ಎಂದು ಕಾನ್ಪುರ್ ಎಸ್ ಎಸ್ ಪಿ ಶಲಭ್ ಮಾಥುರ್ ನೆನ್ನೆ ಹೇಳಿದ್ದಾರೆ.
ಈ ಸಾವಿನ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಇಲ್ಲಿಯವರೆಗೂ ಯಾವುದೇ ಬಂಧನಗಳಾಗಿಲ್ಲ.