ಅಲಿರಾಜಪುರ (ಮಧ್ಯಪ್ರದೇಶ): ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಲು ಸಹಕರಿಸುವಂತೆ ಅಲ್ಲಿನ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮನವಿ ಮಾಡಿದ್ದಾರೆ. ಜನರ ತೊಂದರೆಗಳಿಗೆ ಅಭಿವೃದ್ಧಿ ಮಾರ್ಗದ ಪರಿಹಾರಗಳನ್ನು ನೀಡುವತ್ತ ತಮ್ಮ ಸರ್ಕಾರ ಗಮನ ಹರಿಸಿರುವುದಾಗಿ ಅವರು ತಿಳಿಸಿದ್ದಾರೆ.
"ಮೆಹಬೂಬಾ ಅವರ ಜಮ್ಮು ಮತ್ತು ಕಾಶ್ಮೀರ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಎಲ್ಲ ತೊಂದರೆಗಳಿಗೂ ಅಭಿವೃದ್ಧಿ ಮಾರ್ಗದಲ್ಲಿ ಪರಿಹಾರಗಳನ್ನು ಕಂಡುಹಿಡಿಯುತ್ತಿದ್ದೇವೆ" ಎಂದು ಮೋದಿ ಹೇಳಿದ್ದಾರೆ.
"ಕೇವಲ ಬೆರಳಣಿಕೆಯಷ್ಟು ಜನರಿಗೆ ಮಾತ್ರ ತಪ್ಪು ಗ್ರಹಿಕೆ ಮೂಡುವಂತೆ ಮಾಡಲಾಗಿದೆ" ಎಂದಿರುವ ಅವರು ಅವರಷ್ಟೇ ಕಾಶ್ಮೀರದಲ್ಲಿನ ತೊಂದರೆಗೆ ಕಾರಣ ಎಂದಿದ್ದಾರೆ. ಜುಲೈ 8 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ನಂತರ ನಡೆದ ಪ್ರತಿಭಟನೆ ಮತ್ತು ಹಿಂಸೆಯಲ್ಲಿ 55 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
"ಕೆಲವು ಜನ ಕಾಶ್ಮೀರಕ್ಕೆ ಹೆಚ್ಚಿನ ತೊಂದರೆ ತಂದೊಡ್ಡುತ್ತಿದ್ದಾರೆ" ಎಂದಿರುವ ಪ್ರಧಾನಿ "ಕಾಶ್ಮೀರಕ್ಕೆ ಶಾಂತಿ ಬೇಕಾಗಿದೆ. ಅವರ ಜೀವನ ಸುಧಾರಿಸಿಕೊಳ್ಳಲು ಕಾಶ್ಮೀರಿಗಳಿಗೆ ಏನು ಬೇಕೋ ಅದನ್ನು ಕೇಂದ್ರ ಸರ್ಕಾರ ಪೂರೈಸುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ.