ಪ್ರಧಾನ ಸುದ್ದಿ

ಮಹದಾಯಿ ಹೋರಾಟಗಾರರಿಗೆ ಸಿಹಿ; ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು

Srinivasamurthy VN

ಧಾರವಾಡ: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಡೆದ ಗಲಾಟೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಧಾರವಾಡ ಜಿಲ್ಲೆಯ  ನವಲಗುಂದ ತಾಲೂಕಿನ 179 ರೈತರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.

ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಧಾರವಾಡ ಜಿಲ್ಲೆ, ಗದಗ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ವೇಳೆ ಧಾರವಾಡದ ನವಲಗುಂದ ಮತ್ತು  ಯಮನೂರು ಗ್ರಾಮಗಳಲ್ಲಿ ಪೊಲೀಸರತ್ತ ಕಲ್ಲು ತೂರಾಟಾ, ಲಾಠಿ ಚಾರ್ಜ್ ನಂತಹ ಗಂಭೀರ ಪ್ರಕರಣಗಳು ನಡೆದಿದ್ದವು. ಈ ಹಿನ್ನಯಲ್ಲಿ ನವಲಗುಂದ ತಾಲ್ಲೂಕಿನಾದ್ಯಂತ ಕಾರ್ಯಾಚರಣೆ  ನಡೆಸಿದ್ದ ಪೊಲೀಸರು ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಸುಮಾರು 180ಕ್ಕೂ ಅಧಿಕ ಮಂದಿ ರೈತರನ್ನು ಬಂಧಿಸಿದ್ದರು.

25 ಪ್ರಕರಣಗಳಡಿ 187 ರೈತರ ಬಂಧನವಾಗಿದ್ದು, ಈ ಪೈಕಿ 8 ಜನರಿಗೆ 2 ದಿನಗಳ ಹಿಂದೆ ಜಾಮೀನು ದೊರಕಿತ್ತು. ಬಂಧಿತರ ಪರ ವಕೀಲರ ಸಂಘ ಜಾಮೀನು ಅರ್ಜಿ ಸಲ್ಲಿಸಿತ್ತು. ಗುರುವಾರ  ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ಆದರೆ ರೈತರ ಬಂಧನವನ್ನು ತೀವ್ರ ವಿರೋಧಿಸಿದ್ದ ರೈತ ಪರ ಸಂಘಟನೆಗಳು ಅವರ ಬಿಡುಗಡೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ಈ ಸಂಬಂಧ ವಿಚಾರಣೆ ನಡೆಸಿದ ಧಾರವಾಡ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಎಲ್ಲ ಬಂಧಿತ ರೈತರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದರಂತೆ ಜಿಲ್ಲಾ ಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು, ಬಂಧಿತ  ರೈತರು ತಲಾ 50 ಸಾವಿರ ರು.ಗಳ ವೈಯುಕ್ತಿಕ ಬಾಂಡ್ ನೀಡಬೇಕು. ಪ್ರತಿ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ಠಾಣೆಗೆ ಹಾಜರಾಗಬೇಕು, ಸಾಕ್ಷಿ ನಾಶ ಮಾಡಬಾರದು,  ಶಾಂತಿಭಂಗ ಮಾಡಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾನೂನು ತೊಡಕಿನ ನಡುವೆಯೂ ರೈತರ ಬಿಡುಗಡೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ  ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘ ಜಾಮೀನು ಅರ್ಜಿ ಸಲ್ಲಿಸಿ, ನರಗುಂದದ 14 ರೈತರನ್ನು ಬಂಧಮುಕ್ತಗೊಳಿಸಿತ್ತು. ಈಗ ರೈತರ ಪರವಾಗಿ ವಕೀಲರ ಸಂಘ ಸಲ್ಲಿಸಿದ್ದ ಜಾಮೀನು ಅರ್ಜಿ  ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಅವರು, 179 ರೈತರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಜಾಮೀನು ದೊರೆತರೂ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ
ಇಂದು ರೈತರಿಗೆ ಜಾಮೀನು ದೊರೆತರೂ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದ ಆದೇಶದ ಪ್ರತಿಯನ್ನು ರೈತ ಪರ ವಕೀಲರು ನವಲಗುಂದ ನ್ಯಾಯಾಲಯಕ್ಕೆ  ಸಲ್ಲಿಸಿ, ಅಲ್ಲಿಂದ ಅನುಮತಿ ಪತ್ರ ಪಡೆದು ಆ ಪತ್ರವನ್ನು ಧಾರವಾಡ, ಬಳ್ಳಾರಿ, ಚಿತ್ರದುರ್ಗ ಜೈಲುಗಳಿಗೆ ತೆರಳಿ ಅಲ್ಲಿನ ಜೈಲಾಧಿಕಾರಿಗಳಿಗೆ ತಲುಪಿಸಬೇಕು. ಅಂದಾಗ ಮಾತ್ರ ಜೈಲಿನಿಂದ  ರೈತರು ಹೊರ ಬರಲು ಸಾಧ್ಯ. ಈ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ನಂತರವಷ್ಟೇ ರೈತರ ಜೈಲುವಾಸ ಮುಕ್ತಾಯವಾಗಲಿದೆ.

SCROLL FOR NEXT