ಯುದ್ಧ ನಿರತ ಯೆಮೆನ್ ನ ಒಂದು ದೃಶ್ಯ
ನವದೆಹಲಿ: ಯುದ್ಧ ನಿರತ ಯೆಮೆನ್ ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ ಮತ್ತು ಈ ಅರಬ್ ದೇಶದಿಂದ ಇನ್ನುಳಿದ ಭಾರತೀಯರ ರಕ್ಷಣೆ ಸಾಧ್ಯವಿಲ್ಲ ಎಂದು ಸರಣಿ ಟ್ವೀಟ್ ಮೂಲಕ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಬುಧವಾರ ತಿಳಿಹೇಳಿದ್ದಾರೆ.
ಒಬ್ಬ ವ್ಯಕ್ತಿ ಮಾಡಿದ್ದ ಟ್ವೀಟ್ ಪ್ರಕಾರ, ಯೆಮೆನ್ ನ ರಾಜಧಾನಿ ಸನ್ನಾದಿಂದ 127 ಕಿಮೀ ದೂರದಲ್ಲಿರುವ ಹಜ್ಜಾನಲ್ಲಿ ಪತಿ ವಿಚ್ಚೇಧನ ನೀಡಿ ಅಮೆರಿಕಾಕ್ಕೆ ತೆರಳಿರುವುದರಿಂದ ಹೈದರಾಬಾದ ಮೂಲದ ಮಹಿಳೆಯೊಬ್ಬರು ತಮ್ಮ ಮಕ್ಕಳೊಂದಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬುದಕ್ಕೆ ಸುಶ್ಮಾ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
"ನಾವು 4500 ಭಾರತೀಯರು ಮತ್ತು 2500 ವಿದೇಶಿಯರನ್ನು ಯೆಮೆನ್ ನಿಂದ ರಕ್ಷಿಸಿದ್ದೇವೆ" ಎಂದು ಸುಶ್ಮಾ ಟ್ವೀಟ್ ಮಾಡಿದ್ದಾರೆ.
ಯೆಮೆನ್ ಬಿಡುವಂತೆ ನಾವು ಹಲವು ಬಾರಿ ಮನವಿ ಮಾಡಿದೆವು ಎಂದು ತಿಳಿಸಿರುವ ಅವರು "ಅಲ್ಲಿನ ಪರಿಸ್ಥಿತಿಯಿಂದಾಗಿ ನಾವು ರಾಯಭಾರ ಕಚೇರಿಯನ್ನು ಮುಚ್ಚಬೇಕಾಯಿತು" ಮತ್ತು ಕೆಲವರು ಅಲ್ಲಿಯೇ ಉಳಿದಿಕೊಳ್ಳಲು ಇಚ್ಛಿಸಿದರು ಎಂದು ತಿಳಿಸಿದ್ದಾರೆ.
"ರಕ್ಷಣೆ ಪಡೆದ ಕೆಲವರು ಮತ್ತೆ ಯೆಮೆನ್ ಗೆ ಹಿಂದಿರುಗಿದಿರು" ಎಂದು ಕೂಡ ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
"ನಮ್ಮ ರಾಯಭಾರ ಕಚೇರಿ ಈಗ ಅಲ್ಲಿಲ್ಲ. ಅಲ್ಲಿ ಯುದ್ಧ ನಿರತವಾಗಿದೆ. ಈ ಸಮಯದಲ್ಲಿ ಜನರನ್ನು ಅಲ್ಲಿಂದ ರಕ್ಷಿಸಲು ಸಾಧ್ಯವಿಲ್ಲ" ಎಂದು ಸುಶ್ಮಾ ಹೇಳಿದ್ದಾರೆ.
ಯೆಮೆನ್ ನಲ್ಲಿನ ಸರ್ಕಾರವನ್ನು ಹೌತಿ ಬಂಡುಕೋರರು ಉರುಳಿಸಿದ್ದರಿಂದ ಆ ದೇಶದ ಮೇಲೆ ಸೌದಿ ಅರೇಬಿಯಾ ಮುಖಂಡತ್ವದ ಅರಬ್ ಮೈತ್ರಿ ರಾಷ್ಟ್ರಗಳು ಯುದ್ಧ ಹೂಡಿವೆ.
16 ತಿಂಗಳ ನಾಗರಿಕ ಯುದ್ಧದಲ್ಲಿ 6500 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2.5 ದಶಲಕ್ಷಕ್ಕೂ ಹೆಚ್ಚು ಜನ ದೇಶ ತೊರೆಯುವಂತೆ ಮಾಡಿದೆ.