ಬೆಂಗಳೂರು: ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಬೆಂಗಳೂರು ದಕ್ಷಿಣ ಉಪ ವಿಭಾಗ ಅಧಿಕಾರಿ ಡಿ.ಬಿ.ನಟೇಶ್ ಅವರು ಕ್ಲೀನ್ ಚಿಟ್ ನೀಡಿದ್ದಾರೆ.
ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ತಮ್ಮ ತಾಯಿ ತಾರಾಭಾಯ್ ಹೆಸರಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಮುಖ್ಯ ಕಾರ್ಯದರ್ಶಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉಪ ವಿಭಾಗ ಅಧಿಕಾರಿ ಡಿ.ಬಿ.ನಟೇಶ್ ಅವರು ಇಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ತಾರಾಭಾಯ್ ಅವರು ಕಾನೂನು ಪ್ರಕಾರವೇ ಜಮೀನು ಖರಿದಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಟೇಶ್ ಅವರು ಕಂದಾಯ ಇಲಾಖೆಗೆ ನೀಡಿರುವ ವರದಿ ಮಾಧ್ಯಮಕ್ಕೆ ಲಭ್ಯವಾಗಿದ್ದು, ತಾರಾಭಾಯ್ ಮಾರುತಿರಾವ್ ಜಾಧವ್ ಅವರ ಹೆಸರಿನಲ್ಲಿರುವ ಜಮೀನು ಕ್ರಮಬದ್ಧವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೇ ಸಂಖ್ಯೆ 29ರಲ್ಲಿ 74 ಎಕರೆ ಸರ್ಕಾರಿ ಜಮೀನಿದೆ. ಈ ಪೈಕಿ 8.30 ಎಕರೆ ತಮ್ಮ ತಾಯಿಗೆ ಮಂಜೂರಾಗಿದ್ದು, ಇದಕ್ಕೆ ದಾಖಲೆ ನೀಡುವಂತೆ ಜಿಲ್ಲಾಧಿಕಾರಿಗೆ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಸೂಚಿಸಿದರು. ಈ 8.30 ಎಕರೆ ಸೇರಿ ಒಟ್ಟು 66 ಎಕರೆ ಜಮೀನನ್ನು ವಿವಿಧ "ಫಲಾನುಭವಿ'ಗಳಿಗೆ ನೀಡಲು ಅಕ್ರಮವಾಗಿ ದಾಖಲೆ ಸೃಷ್ಟಿಗೆ ಹಲವು ಹಂತಗಳಲ್ಲಿ ಸಿದ್ಧತೆ ನಡೆಯುತ್ತಿದ್ದಂತೆ, ಸರ್ವೇ ಇಲಾಖೆ ಅಧಿಕಾರಿಯಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಮುಖ್ಯ ಕಾರ್ಯದರ್ಶಿ, ಅಧಿಕಾರಿಯನ್ನು ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.