ಪ್ರಧಾನ ಸುದ್ದಿ

ಪರಿಕ್ಕರ್ ಅಮೆರಿಕ ಪ್ರವಾಸ; ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಉಭಯ ನಾಯಕರ ಸಹಿ

Srinivasamurthy VN

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಹತ್ವದ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಸೋಮವಾರ ಅಮೆರಿಕಕ್ಕೆ ತೆರಳಿದ್ದ ಪರಿಕ್ಕರ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಷ್ಟನ್ ಕಾರ್ಟರ್ ರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ಹಲವು ಮಹತ್ವದ ಒಪ್ಪಂದಗಳಿಗೆ ಸಹಿ  ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಪರಿಕ್ಕರ್ ಹಾಗೂ ಕಾರ್ಟರ್ ಅವರು ಉಭಯ ದೇಶಗಳ ನಡುವಿನ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮಹತ್ವದ  ಒಪ್ಪಂದದಿಂದಾಗಿ ಭಾರತ ಮತ್ತು ಅಮೆರಿಕ ದೇಶಗಳ ರಕ್ಷಣಾ ಪರಿಕರಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ.

ಇನ್ನು ಇದೇ ವೇಳೆ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತಕ್ಕೆ ರಕ್ಷಣಾ ತಂತ್ರಜ್ಞಾನಗಳ ಹಸ್ತಾಂತರಕ್ಕೆ ಅಮೆರಿಕ ಸಿದ್ಧವಿದ್ದು, ಅಮೆರಿಕದ ರಕ್ಷಣಾ ಕಂಪನಿಗಳು ಭಾರತದಲ್ಲಿ ಹೂಡಿಕೆ  ಮಾಡಲು ಸಿದ್ಧವಿರುವುದಾಗಿ ಉಭಯ ನಾಯಕರು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತ ಅತ್ಯಂತ ಮಹತ್ವದ ಪಾತ್ರವಹಿಸಲಿದ್ದು, ಭಾರತಕ್ಕೆ ಎಲ್ಲ ಅಗತ್ಯ  ತಾಂತ್ರಿಕ ಹಾಗೂ ರಕ್ಷಣಾ ತಂತ್ರಜ್ಞಾನವನ್ನು ಒದಗಿಸಲು ಅಮೆರಿಕ ಸಿದ್ಧವಿದೆ ಎಂದು ಇದೇ ವೇಳೆ ಕಾರ್ಟರ್ ಭರವಸೆ ನೀಡಿದ್ದಾರೆ.

ಆಧುನಿಕ ಸೇನಾ ತಂತ್ರಜ್ಞಾನಗಳ ಪರಸ್ಪರ ಹಂಚಿಕೊಳ್ಳುವಿಕೆ ಇಂದಿನ ತುರ್ತು ಅಗತ್ಯತೆಗಳಲ್ಲೊಂದು ಎಂದು ಮನೋಹರ್ ಪರಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಹಾಲಿ ಪ್ರವಾಸದ ವೇಳೆ ಮನೋಹರ್ ಪರಿಕ್ಕರ್ ಅವರು ಅಮೆರಿಕದ ಪ್ರಮುಖ ಯುದ್ಧ ವಿಮಾನ ತಯಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು, ಪ್ರಮುಖವಾಗಿ ಫಿಲಿಡೆಲ್ಫಿಯಾದಲ್ಲಿರುವ  ಬೋಯಿಂಗ್ ವಿಮಾನ ತಯಾರಿಕಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಲ್ಲಿ ತಯಾರಾಗುತ್ತಿರುವ ಸಿಹೆಚ್ 47ಎಫ್ ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಳ ತಯಾರಿಕೆಯನ್ನು  ವೀಕ್ಷಿಸಲಿದ್ದಾರೆ. ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಭಾರತ ಈಗಾಗಲೇ ಖರೀದಿಸಿದ್ದು, 2019ರ ವೇಳೆಗೆ ಈ ಅತ್ಯಾಧುನಿ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಗೆ ಸೇರ್ಪಡೆಯಾಗುವ  ಸಾಧ್ಯತೆ ಇದೆ.

ಕೇಂದ್ರ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪರಿಕ್ಕರ್ ಅವರು ಒಟ್ಟು ಆರು ಬಾರಿ ಅಮೆರಿಕಕ್ಕೆ ಪ್ರವಾಸ ಕೈಗೊಂಡಿದ್ದು, ಕಳೆದ ಸೆಪ್ಟೆಂಬರ್ ನಲ್ಲಿ ಅಮೆರಿಕಕ್ಕೆ ಆಗಮಸಿದ್ದ ಪರಿಕ್ಕರ್  ಅವರು, ಒಟ್ಟು 3.1 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಪರಿಕರಗಳ ಒಪ್ಪಂದಕ್ಕೆ ಬೊಯಿಂಗ್ ಸಂಸ್ಥೆಯೊಂದಿಗೆ ಸಹಿ ಹಾಕಿದ್ದರು. ಈ ಮಹತ್ವದ ಒಪ್ಪಂದದ ಅನ್ವಯ ಭಾರತ ಬೋಯಿಂಗ್  ಸಂಸ್ಥೆ ನಿರ್ಮಿಸುತ್ತಿರುವ 22ಎಹೆಚ್-64ಇ ಅಪಾಚೆ ಲಾಂಗ್ ಬೋವ್ ಯುದ್ಧ ಹೆಲಿಕಾಪ್ಟರ್ ಅನ್ನು ಖರೀದಿಸಿತ್ತು. ಇದೂ ಹೆಲಿಕಾಪ್ಟರ್ ಗಳೂ 2019ರ ಅಂತ್ಯದ ವೇಳೆ ಭಾರತಕ್ಕೆ ಲಭ್ಯವಾಗುವ  ಸಾಧ್ಯತೆಗಳಿವೆ.

SCROLL FOR NEXT