ಗೌಹಾಟಿ: ಸೆಂಟ್ರಲ್ ಅಸ್ಸಾಂನ ನಾಗೊಂ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಎಕ್ಸ್ಪ್ರೆಸ್ ರೈಲು ಹರಿದು ಮೂರು ಆನೆಗಳು ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ ಇವುಗಳಲ್ಲಿ ಎರಡು ಆನೆಗಳು ಗರ್ಭಿಣಿಯಾಗಿದ್ದು, ಈ ದುರಂತದಲ್ಲಿ ಅವುಗಳು ಗರ್ಭದಲ್ಲೇ ಮೃತಪಟ್ಟ ಮರಿಗಳಿಗೆ ಜನ್ಮ ನೀಡಿವೆ. ರೈಲ್ವೆ ಹಳಿಯಲ್ಲಿ ಮೃತಪಟ್ಟ ಈ ಮರಿಗಳು ಸಿಕ್ಕಿವೆ. ಜೋಜಿಜಾನ್ ನ ಆನೆ ಕಾರಿಡಾರ್ ನಲ್ಲಿ ಈ ಘಟನೆ ನಡೆದಿದೆ.
ರೈಲ್ವೆ ನಿಲ್ದಾಣದ ಮಾಸ್ಟರ್ ಗಳ ಜೊತೆಗೆ ಕುಳಿತು ಆನೆ ಕಾರಿಡಾರ್ ಪ್ರದೇಶದಲ್ಲಿ ರೈಲುಗಳ ವೇಗಮಿತಿಯನ್ನು ಚರ್ಚಿಸಲು ಅರಣ್ಯ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ರಾಜ್ಯದ ಅರಣ್ಯ ಸಚಿವೆ ಪರಿಮಳ ರಾಣಿ ಬ್ರಹ್ಮ ಹೇಳಿದ್ದಾರೆ.
"ಈ ದುರಂತ ಘಟನೆಯ ಬಗ್ಗೆ ಕೇಳಿ ಅತೀವ ದುಃಖವಾಗಿದೆ. ಈ ಹಿಂದೆ ಕೂಡ ಹಲವು ಬಾರಿ, ಆನೆ ಕಾರಿಡಾರ್ ಗಳಲ್ಲಿ ವೇಗವನ್ನು ತಗ್ಗಿಸುವುದಕ್ಕೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅತೀವ ಮಂಜು ಕವಿದ ವಾತಾವರಣದಿಂದ ಈ ದುರ್ಘಟನೆ ನಡೆದಿರುವ ಸಾಧ್ಯತೆಯಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಅಲ್ಲಿನ ಪ್ರಾದೇಶಿಕ ನಿವಾಸಿಗಳು ಹೇಳುವಂತೆ, ಆನೆಗಳ ದೊಡ್ಡ ಗುಂಪೊಂದು ಭಾನುವಾರ ರಾತ್ರಿ ಆಹಾರಕ್ಕಾಗಿ ಗ್ರಾಮಕ್ಕೆ ಲಗ್ಗೆಯಿಟ್ಟಿದ್ದವು ನಂತರ ರೈಲ್ವೆ ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ.
"ಸಾಮಾನ್ಯವಾಗಿ ಚಳಿಗಾಲದಲ್ಲಿ ಆನೆಗಳು ಕಾಡಿನಿಂದ ಹೊರಬಂದು ನಮ್ಮ ಬೆಳೆಗಳಿಗೆ ಹಾನಿ ಮಾಡುತ್ತವೆ. ನಾವು ಈ ತೊಂದರೆಯ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿದ್ದೆವು ಆದರೆ ಅವರು ಇದಕ್ಕೆ ಯಾವುದೇ ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ" ಎಂದು ಗ್ರಾಮ ನಿವಾಸಿಗಳು ಆರೋಪಿಸಿದ್ದಾರೆ.