ಬೆಂಗಳೂರು: ಮಾಜಿ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ನಡೆಸಿದ ರಾಸಲೀಲೆ ಸಿಡಿ ಪ್ರಕರಣವನ್ನು ಸಿಐಡಿ ತನಿಖೆ ಆದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಮೇಟಿ ರಾಜಿನಾಮೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರಾಸಲೀಲೆ ಸಿಡಿ ಪ್ರಕರಣವನ್ನು ಮೇಟಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಅಲ್ಲದೆ ಸಂತ್ರಸ್ಥ ಮಹಿಳೆ ಸಹ ಮೇಟಿ ಅವರ ಸಂಬಂಧಿ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶಿಸಲಾಗುವುದು ಎಂದರು.
ಮೇಟಿ ಅವರ ರಾಸಲೀಲೆ ಪ್ರಕರಣದ ಬಗ್ಗೆ ನನಗೆ ಮೊದಲೇ ಮಾಹಿತಿ ಇರಲಿಲ್ಲ. ಒಂದು ವೇಳೆ ಮೊದಲೇ ಮಾಹಿತಿ ಇದ್ದಿದ್ದರೆ ಮೊದಲೇ ರಾಜಿನಾಮೆ ಪಡೆಯುತ್ತಿದ್ದೆ ಎಂದರು.
ಎಚ್.ವೈ.ಮೇಟಿ ಅವರ ರಾಜಿನಾಮೆಯನ್ನು ನಾನು ಅಂಗೀಕರಿಸಿದ್ದೇನೆ ಮತ್ತು ರಾಜ್ಯಪಾಲರ ಅಂಗೀಕಾರಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಅವರು ದೆಹಲಿಯಲ್ಲಿ ಸಿಡಿ ಬಿಡುಗಡೆ ಮಾಡಿದ್ದು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಮೇಟಿ ಅವರು ನೇರವಾಗಿ ಮುಖ್ಯಮಂತ್ರಿಯವರ ಗೃಹ ಸಚೇರಿ ಕೃಷ್ಣಾಕ್ಕೆ ತೆರಳಿ ಸಿದ್ದರಾಮಯ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.