ಪ್ರಧಾನ ಸುದ್ದಿ

ಜನಾರ್ಧನ ರೆಡ್ಡಿ ಕಪ್ಪು ಹಣ ಬಿಳಿ ಮಾಡಲು ಸಹಾಯ ಮಾಡಿದ್ದೇನೆ: ಭೀಮಾ ನಾಯಕ್ ತಪ್ಪೊಪ್ಪಿಗೆ

Lingaraj Badiger
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಮಗಳ ಅದ್ಧೂರಿ ಮದುಗಾಗಿ ಕಪ್ಪು ಹಣ ಬಿಳಿ ಮಾಡಲು ಸಹಾಯ ಮಾಡಿರುವುದಾಗಿ ಕೆಎಎಸ್ ಅಧಿಕಾರಿ ಭೀಮಾನಾಯಕ್ ಅವರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಮಾನತುಗೊಂಡಿರುವ ಅಧಿಕಾರಿ ಸದ್ಯ ಸಿಐಡಿ ವಶದಲ್ಲಿದ್ದು, ತನಿಖೆಯ ವೇಳೆ, ಆತ್ಮಹತ್ಯೆ ಮಾಡಿಕೊಂಡ ತಮ್ಮ ಕಾರು ಚಾಲಕ ರಮೇಶ್ ಗೌಡ ಮತ್ತು ತನ್ನ ಮಧ್ಯೆ ಮನಸ್ತಾಪ ಇತ್ತು. ಆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿಲ್ಲ ಎಂದಿದ್ದಾರೆ. 
ನೋಟ್ ನಿಷೇಧಿಸಿದ ನಂತರ ರೆಡ್ಡಿ ಮಗಳ ಮದುವೆಗಾಗಿ 100 ಕೋಟಿ ರುಪಾಯಿ ಕಪ್ಪು ಹಣವನ್ನು ಬಿಳಿ ಮಾಡಲು ಸಹಕರಿಸಿದ್ದೇನೆ ಎಂದು ಭೀಮಾನಾಯಕ್ ಒಪ್ಪಿಕೊಂಡಿದ್ದು, ನಾಯಕ್ ನೀಡಿದ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಹಳೆ ನೋಟ್ ಅನ್ನು ವಿನಿಮಯ ಮಾಡಿಕೊಟ್ಟ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಇನ್ನು ವಿಚಾರಣೆ ವೇಳೆ ಕಪ್ಪು ಬಿಳಿ ಮಾಡುವ ಒಂದು ಗ್ಯಾಂಗ್ ಇದ್ದು, ಅವರ ಮೂಲಕ ತಮ್ಮ ಆಪ್ತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಬಳಿಕ ಅವರಿಂದ ಹೊಸ ನೋಟ್ ಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಾಲಕ ರಮೇಶ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ ಎಲ್ಲಾ ವ್ಯಕ್ತಿಗಳೊಂದಿಗೂ ಭೀಮಾನಾಯಕ್ ಸಂಪರ್ಕದಲ್ಲಿದ್ದು, ಸೂಕ್ತ ದಾಖಲೆಗಳು ದೊರೆತ ನಂತರ ಜನಾರ್ಧನ ರೆಡ್ಡಿ, ಸಂಸದ ಶ್ರೀರಾಮುಲು, ಬಿಲ್ಡರ್ಸ್, ಉದ್ಯಮಿಗಳು ಹಾಗೂ ಅವರ ಸಂಬಂಧಿಗಳನ್ನು ವಿಚಾರಣೆ ಒಳಪಡಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರಮೇಶ್ ಅವರು, ನನ್ನ ಸಾವಿಗೆ ಭೀಮಾನಾಯಕ್ ಹಾಗೂ ಅವರ ಖಾಸಗಿ ಕಾರು ಚಾಲಕ ಮಹಮದ್‌ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಈ ಸಂಬಂಧ ಮದ್ದೂರು ಠಾಣೆಯಲ್ಲಿ ದೂರು ದಾಖಲಾದ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಭೀಮಾ ನಾಯಕ್ ಅವರನ್ನು ಸೋಮವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಭೀಮಾ ನಾಯಕ್ ಅವರು ರೆಡ್ಡಿ ಅವರ ಮಗಳ ಮದುವೆಗಾಗಿ ಅವರ ಬಳಿ ಇದ್ದ 100 ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಶೇ.20ರಷ್ಟು ಕಮಿಷ್ ಪಡೆದಿದ್ದು, ಈ ವಿಚಾರ ಬೇರೆಯವರಿಗೆ ಹೇಳಿದರೆ ಕೊಲೆ ಮಾಡಿಸುವುದಾಗಿ ತನಗೆ ಬೆದರಿಕೆ ಹಾಕಿದ್ದಾರೆ ಎಂದು ರಮೇಶ್  ಪತ್ರದಲ್ಲಿ ಆರೋಪಿಸಿದ್ದರು.
SCROLL FOR NEXT