ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ನಿರ್ಭಯ್ ಕ್ಷಿಪಣಿ ನಾಲ್ಕನೇ ಬಾರಿ ನಡೆದ ಪರೀಕ್ಷಾರ್ಥ ಪ್ರಯೋಗಲ್ಲೂ ವಿಫಲವಾಗಿದೆ ಎಂದು ತಿಳಿದುಬಂದಿದೆ.
ಒಡಿಶಾದ ಬಲಾಸೋರ್‌ನಲ್ಲಿ ನಡೆದ ಕ್ಷಿಪಣಿ ಪರೀಕ್ಷೆಯಲ್ಲಿ ನಿರ್ಭಯ್ ವಿಫಲವಾಗಿದ್ದು, ಉಡಾವಣೆಯಾದ ಎರಡೇ ನಿಮಿಷದಲ್ಲಿ ಕ್ಷಿಪಣಿ ಗುರಿ ತಪ್ಪಿದೆ. ಆ ಮೂಲಕ ನಾಲ್ಕನೇ ಬಾರಿ ನಡೆದ ಪರೀಕ್ಷೆಯಲ್ಲೂ ನಿರ್ಭಯ್ ಕ್ಷಿಪಣಿ ವಿಫಲವಾಗುವ ಮೂಲಕ ಇದರ ಇಡೀ ಯೋಜನೆಗೆ ಹಿನ್ನಯಾದಂತಾಗಿದೆ.
ಒಡಿಶಾದ ಬಲಾಸೋರ್‌ನಲ್ಲಿ ಕ್ಷಿಪಣಿ ಉಡಾವಣಾ ವಾಹಕದ ಮೂಲಕ ನಿರ್ಭಯ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿತ್ತು. ಆದರೆ ಕ್ಷಿಪಣಿಯಲ್ಲಿನ ತಾಂತ್ರಿಕ ದೋಷದಿಂದಾಗಿ ಕ್ಷಿಪಣಿ ಉಡಾವಣೆಯಾದ ಎರಡೇ ನಿಮಿಷದಲ್ಲಿ ದಿಕ್ಕು ತಪ್ಪಿತು. ಹೀಗಾಗಿ ಕ್ಷಿಪಣಿಯನ್ನು ಮಾರ್ಗ ಮಧ್ಯೆಯೇ ನಾಶಪಡಿಸಿ ಅದು ಬಂಗಾಳಕೊಲ್ಲಿಯಲ್ಲಿ ಬೀಳುವಂತೆ ಮಾಡಲಾಯಿತು.
1,000 ಕಿ.ಮೀ. ದೂರ ಸಾಮರ್ಥ್ಯದ 'ನಿರ್ಭಯ್' ಕ್ಷಿಪಣಿಯನ್ನು 2013ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಮೊದಲ ಯತ್ನವೇ ವಿಫಲವಾಗಿತ್ತು. ಬಳಿಕ ಮತ್ತೆ 2014ರ ಅಕ್ಟೋಬರ್‌ನಲ್ಲಿ ಎರಡನೇ ಬಾರಿ ನಡೆಸಲಾದ ಪರೀಕ್ಷೆ ಭಾಗಶಃ ಯಶಸ್ವಿಯಾಗಿತ್ತು. ಆದರೆ, 2015ರ ಅಕ್ಟೋಬರ್ ಹಾಗೂ ನಿನ್ನೆ ನಡೆದ ಪರೀಕ್ಷೆಗಳೆರಡೂ ವಿಫಲವಾಗುವುದರೊಂದಿಗೆ ಇಡೀ ಯೋಜನೆಗೆ ಹಿನ್ನಡೆಯಾಗಿದೆ.
ವಾಯುಸೇನೆ ಸೇರ್ಪಡೆಗೊಳಿಸುವ ಉದ್ದೇಶದಿಂದ ನಿರ್ಭಯ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಸಾವಿರ ಕಿ.ಮೀ ದೂರ ಕ್ರಮಿಸಬಲ್ಲ ನಿರ್ಭಯ್ ಕ್ಷಿಪಣಿ ಅಮೆರಿಕದ ಟಾಮ್ಹಾಕ್ ಕ್ಷಿಪಣಿಯಷ್ಟೇ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿ ಪರೀಕ್ಷೆ ಯಶಸ್ವಿಯಾದ ಬಳಿಕ ಅದನ್ನು ವಾಯುಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.