ಪ್ರಧಾನ ಸುದ್ದಿ

ಉದ್ಯಮಿ ಸಂಜಯ್ ಭಂಡಾರಿ ವಿದೇಶಕ್ಕೆ ಪರಾರಿ ಪ್ರಕರಣ; ವರದಿ ಕೇಳಿದ ಕೇಂದ್ರ ಸರ್ಕಾರ!

Srinivasamurthy VN

ನವದೆಹಲಿ: ವಿಜಯ್ ಮಲ್ಯ ಪ್ರಕರಣ ಇನ್ನೂ ಹಸಿರಾಗಿರುವಂತೆ ಮತ್ತೋರ್ವ ಉದ್ಯಮಿ ಸಂಜಯ್ ಭಂಡಾರಿ ವಿದೇಶಕ್ಕೆ ಪರಾರಿಯಾದಿರುವ ಕುರಿತು ಮಾಹಿತಿ ತಿಳಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಬಗ್ಗೆ ವರದಿ ಕೇಳಿದೆ ಎಂದು  ತಿಳಿದುಬಂದಿದೆ.

ಮೂಲಗಳ ಪ್ರಕಾರ ಸಂಜಯ್ ಭಂಡಾರಿ ಪಲಾಯನ ಕುರಿತು ಕೇಂದ್ರ ಸರ್ಕಾರ ವಲಸೆ ಇಲಾಖೆಯಿಂದ ವರದಿ ಕೇಳಿದ್ದು, ಭಂಡಾರಿ ಬ್ರಿಟನ್ ತೆರಳಿದ ಮಾಹಿತಿ ಮತ್ತು ಪಾಸ್ ಪೋರ್ಟ್ ಕುರಿತ ಮಾಹಿತಿ ನೀಡುವಂತೆ ಕೇಳಿದೆ.  ಸರ್ಕಾರದ ಪ್ರಶ್ನೆಗೆ ಉತ್ತರಿಸಿರುವ ವಲಸೆ ಇಲಾಖೆ ಭಾರತದ ಯಾವುದೇ ವಿಮಾನ ನಿಲ್ದಾಣದಿಂದಲೂ ಸಂಜಯ್ ಭಂಡಾರಿ ಪ್ರಯಾಣ ಮಾಡಿಲ್ಲ. ಬಹುಶಃ ಅವರು ನೇಪಾಳಕ್ಕೆ ತೆರಳಿ ಅಲ್ಲಿಂದ ಬ್ರಿಟನ್ ಗೆ ಪ್ರಯಾಣಿಸಿರಬಹುದು  ಎಂದು ಗೃಹಇಲಾಖೆಗೆ ಉತ್ತರಿಸಿದೆ.

ಇದೇ ವೇಳೆ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ಕುರಿತಾಗಿಯೂ ಕೇಂದ್ರ ಗೃಹ ಇಲಾಖೆ ಮಾಹಿತಿ ಕೇಳಿದ್ದು, ಅಧಿಕೃತ ರಹಸ್ಯಗಳ ಕಾಯ್ದೆಯಡಿಯಲ್ಲಿ ಭಂಡಾರಿ  ವಿರುದ್ಧ ದಾಖಲಾಗಿರುವ ಮಾಹಿತಿಗಳ ಬಗ್ಗೆಯೂ ಕೇಂದ್ರ ಸರ್ಕಾರ ಮಾಹಿತಿ ಕೇಳಿದೆ ಎಂದು ತಿಳಿದುಬಂದಿದೆ.

ಸಂಜಯ್ ಭಂಡಾರಿ ನಾಪತ್ತೆ ಕುರಿತು ವರದಿ ಮಾಡಿದ್ದ "ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಪತ್ರಿಕೆ
ಇನ್ನು ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ನಾಪತ್ತೆ ಕುರಿತಂತೆ ಇತ್ತೀಚೆಗಷ್ಟೇ "ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಪತ್ರಿಕೆ ವರದಿ ಮಾಡಿತ್ತು.  ಈ ಹಿಂದೆ ಹಲವು ಪ್ರಕರಣಗಳಲ್ಲಿ ಸಂಜಯ್ ಬಂಡಾರಿ ವಿಚಾರಣೆ ಎದುರಿಸಿದ್ದರು.  ಅಕ್ಬೋಬರ್ ತಿಂಗಳಲ್ಲಿ ನಡೆದಿದ್ದ ಐಟಿ ಅಧಿಕಾರಿಗಳ ವೇಳೆ ಸಂಜಯ್ ಬಂಡಾರಿ ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಭಾರತೀಯ ಸೇನೆಗೆ ಸೇರಿದ ಶಸ್ತ್ರಾಸ್ತ್ರಗಳ ರಹಸ್ಯ ಕಡತಗಳ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇವರ  ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಸೆಕ್ಷನ್ 3 ಮತ್ತು 5ರಡಿಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಏಪ್ರಿಲ್ ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆಗಳ ದಾಳಿ ವೇಳೆಯಲ್ಲೂ ಸಾಕಷ್ಚು ದಾಖಲೆಗಳು  ಪತ್ತೆಯಾಗಿದ್ದವು. ಏಪ್ರಿಲ್ 27ರಂದು ನಡೆದಿದ್ದ ದಾಳಿ ವೇಳೆ ಸಂಜಯ್ ಬಂಡಾರಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ನಡುವೆ ನಡೆದಿದ್ದ ವ್ಯವಹಾರಗಳ ದಾಖಲೆಗಳು  ಲಭ್ಯವಾಗಿದ್ದವು.

ಆದರೆ ಸಂಜಯ್ ಬಂಡಾರಿ ಅವರೊಂದಿಗೆ ತಾವು ಯಾವುದೇ ರೀತಿಯ ವ್ಯವಹಾರ ಹೊಂದಿಲ್ಲ ಎಂದು ರಾಬರ್ಟ್ ವಾದ್ರಾ ಆರೋಪವನ್ನು ತಳ್ಳಿ ಹಾಕಿದ್ದರು. ಇನ್ನು ಅಧಿಕೃತ ರಹಸ್ಯಗಳ ಕಾಯ್ದೆಯಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದ  ಸಂಜಯ್ ಬಂಡಾರಿ ಅವರಿಗೆ ವಿಚಾರಣೆಗೆ ಹಾಡರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.

SCROLL FOR NEXT