ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಇಸ್ರೇಲ್ ದಾಳಿ ನಡೆಸಲಿದೆ ಎಂಬ ಸುಳ್ಳುಸುದ್ದಿಯನ್ನು ಓದಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು ಇಸ್ರೇಲ್ ಮೇಲೆ ಪರಮಾಣು ದಾಳಿ ಮಾಡುವ ಸಾಮರ್ಥ್ಯ ಪಾಕಿಸ್ತಾನಕ್ಕೂ ಇದೆ ಎಂದು ಟ್ವೀಟ್ ಮಾಡಿದ್ದಾರೆ.
awdnews.com ಎಂಬ ಖಾಸಗಿ ವೆಬ್ಸೈಟ್ನಲ್ಲಿ ಸಿರಿಯಾಗೆ ಪಾಕಿಸ್ತಾನದ ಸೇನೆ ಆಗಮಿಸಿದರೆ ನಾವು ಪಾಕ್ ವಿರುದ್ಧ ಅಣ್ವಸ್ತ್ರ ಬಳಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ತಿಳಿಸಿದ್ದಾರೆ ಎಂದು ಡಿಸೆಂಬರ್ 20 ರಂದು ವರದಿ ಮಾಡಲಾಗಿತ್ತು. ಈ ಸುದ್ದಿಯ ಸತ್ಯಾಸತ್ಯತೆಯ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯದೇ ಕನಿಷ್ಠ ಪಕ್ಷ ಸುದ್ದಿಯ ಪರಾಮರ್ಶೆ ನಡೆಸದ ಪಾಕ್ ರಕ್ಷಣಾ ಸಚಿವ ಖ್ವಾಜಾ ಮೊಹಮದ್ ಆಸಿಫ್ ಅವರು ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಸ್ರೇಲ್ಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಬಳಿಯೂ ಅಣ್ವಸ್ತ್ರಗಳಿದ್ದು, ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂಬುದನ್ನು ಇಸ್ರೇಲ್ ಮರೆಯಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಇಲಾಖೆಮಾಜಿ ರಕ್ಷಣಾ ಸಚಿವರು ಈ ಹೇಳಿಕೆಯನ್ನು ನೀಡಿಲ್ಲ ಎಂದು ಆಸಿಫ್ ಟ್ವೀಟ್ಗೆ ಉತ್ತರಿಸಿದೆ. ಜತೆಗೆ ವೆಬ್ಸೈಟ್ ಪ್ರಕಟಿಸಿರುವ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಆದರೆ ವೆಬ್ ಸೈಟಿನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಇಸ್ರೇಲ್ನ ಮಾಜಿ ರಕ್ಷಣಾ ಸಚಿವ ಮೋಸೆ ಯಾಲೂನ್ ಪಾಕ್ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಪ್ರಸ್ತುತ ಇಸ್ರೇಲ್ನ ರಕ್ಷಣಾ ಸಚಿವರಾಗಿ ಅವಿಗಡೋರ್ ಲಿಬೆರ್ವುನ್ ಕಾರ್ಯ ನಿರ್ವಹಿಸುತ್ತಿದ್ದು, ಈ ವಿಚಾರ ತಿಳಿಯದ ಖ್ವಾಜಾ ಆಸಿಫ್ ಇಸ್ರೇಲ್ ದೆ ಬೆದರಿಕೆ ಹಾಕುವ ಮೂಲಕ ಇದೀಗ ಟ್ವಿಟರ್ ನಲ್ಲಿ ಗೇಲಿಗೊಳಗಾಗಿದ್ದಾರೆ.