ಪ್ರಧಾನ ಸುದ್ದಿ

ರಾಜ್ಯದಲ್ಲಿ 120 ಬಿಲಿಯನ್ ಡಾಲರ್ ಹೂಡಿಕೆಗೆ ಅವಕಾಶ ಇದೆ: ಸಿಎಂ

Lingaraj Badiger
ಬೆಂಗಳೂರು: ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ರಾಜ್ಯದಲ್ಲಿ 120 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಬಂಡವಾಳ ಹೂಡುವ ಉದ್ಯಮಿಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು, ಮುಂದೆ ಬನ್ನಿ ಯಾವುದೇ ರೀತಿಯ ತೊಂದರೆ ಮತ್ತು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ.ಜತೆಗೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ನಿಮಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು,
ಪ್ರಸ್ತುತ ರಾಜ್ಯ 120 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದ್ದು, 2035ರ ವೇಳೆಗೆ 700 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಲಾಗಿದೆ ಎಂದರು. ಅಲ್ಲದೆ ವಿಶ್ವ ಹೂಡಿಕೆದಾರರ ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ ಇದೆ ಎಂದು ಸಿಎಂ ಹೇಳಿದರು.
ಈ ಸಮಾವೇಶದ ಮೂಲಕ ಸುಮಾರು 5 ಲಕ್ಷ ಕೋಟಿ ರುಪಾಯಿ ಬಂಡವಾಳ ಹೂಡಿಕೆಯ ನಿರೀಕ್ಷೆ ಹೊಂದಲಾಗಿದೆ, ಇದರಿಂದ 15 ಲಕ್ಷದಷ್ಟು ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಮುಂದಿನ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಹಣವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡುವ ಭರವಸೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ, ಟ್ರಾಫಿಕ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ, ವಿಸ್ತರಣೆಗೆ ಭೂಮಿ ನೀಡಿ ಎಂದು ಸಮಾವೇಶದಲ್ಲಿ ಹೇಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆಗೂ ಉತ್ತರಿಸಿದ ಸಿಎಂ, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ರಾಜ್ಯದ ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಕೇಂದ್ರ ಸರ್ಕಾರಕ್ಕೆ ನಾವು ಭೂಮಿ ನೀಡಲು ಸಿದ್ಧರಿದ್ದೇವೆ ಸ್ಪಷ್ಟಪಡಿಸಿದರು.
SCROLL FOR NEXT