ಸಾವಿನಲ್ಲೂ ಸಾರ್ಥಕತೆ ಮೆರೆದ ಹರೀಶ್
ನವದೆಹಲಿ: ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದ ಯುವಕ ತನ್ನ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದ. ತನ್ನ ಕೊನೆಯಾಸೆಯಂತೆಯೇ ಮತ್ತೊಂದು ಜೀವಕ್ಕೆ ಬೆಳಕಾದ. ಇಂತಹ ಯುವಕನ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯಗಳು ಇಲ್ಲಿದೆ.
ಹರೀಶ್ ಮೂಲತಃ ಗುಬ್ಬಿ ತಾಲೂಕಿನ ಕರೇಗೌಡನ ಹಳ್ಳಿಯ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. 18 ವರ್ಷಗಳ ಹಿಂದೆಯೇ ಹರೀಶ್ ಕುಟುಂಬ ತನ್ನ ಹಿರಿಯನನ್ನು ಕಳೆದುಕೊಂಡಿತ್ತು. ತಂದೆಯನ್ನು ಕಳೆದುಕೊಂಡಿದ್ದ ಹರೀಶ್ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದ. ಹುಟ್ಟೂರಲ್ಲೇ 10ನೇ ತರಗತಿ ಓದಿದ್ದ ಹರೀಶ್ ನಂತರ ನಿಟ್ಟೂರಿನಲ್ಲಿ ಐಐಟಿ ಮಾಡಿಕೊಂಡಿದ್ದ.
ವಿದ್ಯಾಭ್ಯಾಸವನ್ನು ಮುಂದುವರಿಸುವ ಆಸೆಯಿದ್ದರೂ ಕೂಡ ಆತನಿಗೆ ಓದಲು ಸೌಲಭ್ಯವಿರಲಿಲ್ಲ. ಇಂದಿಗೂ ಈತನ ಕುಟುಂಬ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದು, ಗುಡಿಸಲಿನಲ್ಲೇ ಜೀವನ ನಡೆಸುತ್ತಿದೆ. ಹರೀಶ್ ಸಹೋದರ ಗಿರೀಶ್ ಆಟೋ ಓಡಿಸಿ ಬಂದ ಹಣದಲ್ಲಿ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಕುಟುಂಬದ ಕಷ್ವವನ್ನು ಅರ್ಥಮಾಡಿಕೊಂಡಿದ್ದ ಹರೀಶ್, ಬೆಂಗಳೂರಿನ ತನ್ನ ದೊಡ್ಡಪ್ಪನ ಮನೆಗೆ ಬಂದು ನಗರದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಇದರಂತೆ ಆತನ ಕುಟುಂಬ ಗುಬ್ಬಿ ತಾಲೂಕಿನಲ್ಲೇ ಇದ್ದರಿಂದ ತಾಯಿ ಗೀತಮ್ಮ ಹಾಗೂ ಅಣ್ಣ ಗಿರೀಶ್ ನನ್ನು ನೋಡಲು ರಜಾ ಸಿಕ್ಕಾಗಲೆಲ್ಲಾ ಹೋಗಿ ಬರುತ್ತಿದ್ದ.
ಅಲ್ಲದೆ, ಅಣ್ಣನ ಮದುವೆ ಮಾಡಬೇಕೆಂದು ತಾನು ದುಡಿದ ಹಣದಲ್ಲೇ ತಿಂಗಳಿಗೆ ಇಂತಿಷ್ಟು ಹಣವನ್ನು ಒಂದೆಡೆ ಸಂಗ್ರಹಿಸಿಡುತ್ತಿದ್ದನೆಂದು ಹರೀಶ್ ಸಹೋದರ ಗಿರೀಶ್ ಹೇಳಿಕೊಂಡಿದ್ದಾರೆ. 23 ವರ್ಷದ ಹರೀಶ್.ಎನ್ ತೀರಾ ಮೃದು ಸ್ವಭಾವದ ಹುಡುಗನಾಗಿದ್ದು, ಯಾವಾಗಲೂ ತನಗಿಂತಲೂ ಇತರರ ಬಗ್ಗೆ ಯೋಚಿಸುವಂತಹ ಗುಣವನ್ನುಳ್ಳ ವ್ಯಕ್ತಿಯಾಗಿದ್ದ. ಸದಾ ಕಾಲ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ ಈತ ತನ್ನ ಹಳ್ಳಿಯಲ್ಲೂ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಮೂಲಕ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿದ್ದ.
ಕೆಲವು ದಿನಗಳ ಹಿಂದಷ್ಟೇ ಹರೀಶ್ ಬೈಕ್ ತೆಗೆದುಕೊಳ್ಳುವ ಬಗ್ಗೆ ಅಣ್ಣ ಹಾಗೂ ತಾಯಿಯೊಂದಿಗೆ ಮಾತನಾಡಿದ್ದ. ಈ ವೇಳೆ ಹರೀಶ್ ತಾಯಿ ಕಡಿಮೆ ಬೆಲೆಯ ಉತ್ತಮ ಬೈಕ್ ಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದರಂತೆ ಆಸೆಯಿಂದ ಹರೀಶ್ ಪಲ್ಸರ್ ಬೈಕ್ ಅನ್ನು ಲೋನ್ ಮೂಲಕ ತೆಗೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಆಸೆಯಿಂದ ತೆಗೆದುಕೊಂಡ ಅದೇ ಬೈಕ್ ಆತನ ಪ್ರಾಣಕ್ಕೆ ಕುತ್ತು ತಂದಿದೆ ಎಂದು ಆತನ ಕುಟುಂಬಸ್ಥರು ನೊಂದು ಕಣ್ಣೀರು ಹಾಕಿದ್ದಾರೆ.