ಬೆಂಗಳೂರು: ರಾಜ್ಯ ಲೋಕಾಯುಕ್ತದಂತ ಸಂವಿಧಾನಿಕ ಹುದ್ದೆಗೆ ಕನ್ನಡಿಗರೇ ಬೇಕು ಎನ್ನುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಅನೇಕ ಅನುಮಾನಗಳು ಹಾಗೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಲೋಕಾಯುಕ್ತ ಹುದ್ದೆಗೆ ಸದ್ಯ ನ್ಯಾ.ವಿಕ್ರಮ್ ಜಿತ್ ಸೆನ್ ಮತ್ತು ನ್ಯಾ.ಎಸ್.ಆರ್.ನಾಯಕ್ ನಡುವೆ ಪೈಪೋಟಿ ಮುಂದುವರಿದಿದ್ದು, ಇವರಿಬ್ಬರ ಪೈಕಿ ನ್ಯಾ.ಎಸ್.ಆರ್.ನಾಯಕ್ ಅವರೇ ಸೂಕ್ತ ಎನ್ನುವ ನಿಲುವಿಗೆ ಸರ್ಕಾರ ಬಂದಿದೆ ಎನ್ನಲಾಗಿದೆ.
ಲೋಕಾಯುಕ್ತ ಹುದ್ದೆಗೆ ಕನ್ನಡಿಗರು ಬರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಹೇಳುವ ಮೂಲಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ. ಆದರೆ ಕನ್ನಡಿಗರು ಎನ್ನುವ ಕಾರಣಕ್ಕೆ ಎಸ್. ಆರ್.ನಾಯಕ್ ಬಗ್ಗೆ ಒಲವು ತೋರಿಸುತ್ತಿರುವ ಸರ್ಕಾರದ ನಿಲುವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನೇಕ ಶಂಕೆಗಳು ವ್ಯಕ್ತವಾಗಿವೆ.
ವಿಕ್ರಮ್ ಜಿತ್ ಸೆನ್ ಕನ್ನಡಿಗರಲ್ಲ ಎನ್ನುವ ಕಾರಣಕ್ಕೆ ಅವರನ್ನು ತಿರಸ್ಕರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳೂ ಉದ್ಭವಿಸಿವೆ. ಅಷ್ಟಕ್ಕೂ ನ್ಯಾ.ಎಸ್.ಆರ್.ನಾಯಕ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇಂಥ ಸಂದರ್ಭದಲ್ಲಿ ಎಸ್.ಆರ್.ನಾಯಕ್ ನೇಮಕ ಎಷ್ಟು ಸರಿ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.
ಒಟ್ಟಾರೆ ಭ್ರಷ್ಟಾಚಾರ ತಡೆಯುವ ಮಹತ್ವದ ಸಂಸ್ಥೆಗೆ ಕಾನೂನಿನ ಪ್ರಕಾರ ಅರ್ಹರನ್ನು ನೇಮಿಸುವಾಗ ಭಾಷೆ ಮುಖ್ಯವೋ ಅಥವಾ ಭ್ರಷ್ಟಾಚಾರ ನಿಯಂತ್ರಣ ಮುಖ್ಯವೋ ಎನ್ನುವ ಜಿಜ್ಞಾಸೆ ತಲೆದೋರಿದೆ. ಲೋಕಾಯುಕ್ತದೊಳಗಿನ ಭ್ರಷ್ಟಾಚಾರ ಈಗಾಗಲೇ ಜಗಜ್ಜಾಹೀರಾಗಿದ್ದು, ಸಂಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸವೂ ಕುಸಿದಿದೆ.
ಇಂಥ ಪರಿಸ್ಥಿತಿಯಲ್ಲಿ ಮತ್ತೆ ಸಂಸ್ಥೆ ಮೇಲೆ ವಿಶ್ವಾಸ ಮೂಡಿಸಬೇಕಾದರೆ ಯಾವುದೇ ಆರೋಪಗಳಿಲ್ಲದವರು ಬಂದರಷ್ಟೇ ಸಾಧ್ಯ. ಆದರೆ ಸರ್ಕಾರ ಆರೋಪ ಹೊತ್ತವರನ್ನು ಪ್ರಸ್ತಾಪಿಸಿದರೆ ಸಂಸ್ಥೆಯನ್ನು ಬಲಪಡಿಸುವುದು ಕಷ್ಟವಾಗುತ್ತದೆ. ಹಾಗೆಯೇ ಮುಂದೆ ಯಾವುದೇ ಸಮಸ್ಯೆಗಳು ಎದುರಾದರೂ ಅಚ್ಚರಿ ಇಲ್ಲ ಎನ್ನುವ ವಾದ ಪ್ರತಿವಾದಗಳು ಸರ್ಕಾರದ ಮಟ್ಟದಲ್ಲಿವೆ.
ಎಸ್.ಆರ್.ನಾಯಕ್ ಈಗಾಗಲೇ ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ. ಅವರನ್ನು ಏಕಾಏಕಿ ಲೋಕಾಯುಕ್ತರ ಹುದ್ದೆಗೆ ನೇಮಿಸಿದರೆ, ಅವರ ಸೇವೆಯನ್ನು ಅಲ್ಲಿ ದಿಢೀರ್ ಮೊಟಕು ಮಾಡಿದಂತಾಗುತ್ತದೆ. ನಂತರ ಅವರಿದ್ದ ಆಯೋಗಕ್ಕೆ ಹೊಸಬರ ಹುಡುಕಾಟ ಆರಂಭಿಸಬೇಕಾಗುತ್ತದೆ. ಹಾಗೆಯೇ ಲೋಕಾಯುಕ್ತಕ್ಕೆ ಸಿಕ್ಕಿರುವ ಅರ್ಹರನ್ನು ಕೈ ಬಿಟ್ಟಂತಾಗುತ್ತದೆ. ಹೀಗಾಗಿ ಲೋಕಾಯುಕ್ತ ನೇಮಕ ವೇಳೆ ಭಾಷೆ ನೋಡುವುದು ಸರಿಯಲ್ಲ ಎನ್ನುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.
ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದವರ ಅನೇಕ ನ್ಯಾಯಮೂರ್ತಿಗಳ ಜತೆಗೆ ಕೆಲವು ಕನ್ನಡೇತರ ನ್ಯಾಯಮೂರ್ತಿಗಳು ಉತ್ತಮ ಸೇವೆ ಸಲ್ಲಿಸಿದ್ದಾರೆ. ನ್ಯಾ.ಎ.ಡಿ.ಕೌಶಲ್, ನ್ಯಾ.ರವಿಂದ್ರನಾಥ್ ಪೈನೆ ಸಮರ್ಥ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ಸರ್ಕಾರ ತನ್ನ ನಿರ್ಧಾರವನ್ನು ಜನತೆ ಮೇಲೆ ಹೇರಲು ಕನ್ನಡಿಗರು ಲೋಕಾಯುಕ್ತರಾಗಲಿ ಎಂಬ ಭಾಷೆಯ ಭಾವನಾತ್ಮಕ ವಿಚಾರಗಳ ನ್ನು ಹರಿಯಬಿಡುವ ಪ್ರಯತ್ನ ಮಾಡಿದೆ.
ಈ ಮಧ್ಯೆ, ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅನೇಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅಕ್ರಮಗಳ ಆರೋಪ ಮಾಡಿದ್ದಾರೆ. ಹೌಸಿಂಗ್ ಬಿಲ್ಡಿಂಗ್ ಸೊಸೈಟಿಯಲ್ಲಿ ಸಿಎ ನಿವೇಶನವನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ದೂರಿದ್ದಾರೆ.