ಪಠಾಣ್‌ಕೋಟ್: ಪಠಾಣ್‌ಕೋಟ್ ವಾಯನೆಲೆಯ ಮೇಲೆ ಉಗ್ರರು ದಾಳಿ ಮಾಡಿದಾಗ ಭಾರತೀಯ ಸೇನೆ ಹೇಗೆ ಪ್ರತಿದಾಳಿ ಮಾಡಿತು ಎಂಬುದರ ಬಗ್ಗೆ ಇಲ್ಲಿದೆ ವಿವರ.
ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ ಪಾಕ್ ಉಗ್ರರು ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಕೂಡಲೇ ಭಾರತೀಯ ವಾಯುಸೇನೆ ಆಪರೇಷನ್ ಧಂಗು ಎಂಬ ಕಾರ್ಯಾಚರಣೆಯನ್ನು ಕೈಗೊಂಡಿತು. ವಾಯುನೆಲೆ ಇರುವ ಊರಿನ ಹೆಸರು ಧಂಗು. ಆದ ಕಾರಣ ಈ ಕಾರ್ಯಾಚರಣೆಗೆ 'ಆಪರೇಷನ್ ಧಂಗು' ಎಂಬ ಹೆಸರಿಡಲಾಗಿತ್ತು.
ವಾಯುನೆಲೆಯ ಮೇಲೆ ದಾಳಿ ಮಾಡಿ ಅಲ್ಲಿನ ವಸ್ತುಗಳನ್ನು ನಾಶ ಪಡಿಸುವುದು ಉಗ್ರ ಉದ್ದೇಶವಾಗಿತ್ತು. ಆದರೆ ಅವರ ಉದ್ದೇಶ ಈಡೇರಲು ಭಾರತೀಯ ಸೈನಿಕರು ಬಿಡಲಿಲ್ಲ. ಉಗ್ರರು ಜನವಾಸವಿರುವ ಪ್ರದೇಶದಲ್ಲಿ ಅಡಗಿರುವುದರಿಂದಲೇ ಕಾರ್ಯಾಚರಣೆ ಮಾಡಲು ಸೇನೆಗೆ ಹೆಚ್ಚು ಸಮಯ ಬೇಕಾಗಿ ಬಂತು. ವಾಯುನೆಲೆಗೆ ಯಾವುದೇ ಹಾನಿಯಾಗದಂತೆ ಹೆಚ್ಚು ಗುಂಡಿನ ಚಕಮಕಿಯಾಗದಂತೆ ಕಾರ್ಯಾಚರಣೆ ನಡೆಸಲು ಸೇನೆ ತೀರ್ಮಾನಿಸಿತ್ತು. ಹೀಗೆ ನಡೆಸಿದ ಕಾರ್ಯಾಚರಣೆಯ 10 ಗಂಟೆಗಳಲ್ಲಿ ಉಗ್ರರು ನಿಷ್ಕ್ರಿಯರಾಗಿದ್ದರು. ಆದರ ಕಾರಣ ಸೇನೆ ಮತ್ತೆ ಗುಂಡು ಹಾರಾಟ ನಡೆಸಿಲ್ಲ. ಮರುದಿನ ವಾಯುನೆಲೆ ಬಳಿಯಿರುವ ಒಂದು ಕಟ್ಟಡದಲ್ಲಿ 6 ವಾಯುಸೇನಾ ಅಧಿಕಾರಿ ಸಿಲುಕಿದ್ದರು. ಅಲ್ಲೇ ಉಗ್ರರು ಕೂಡಾ ಅಡಗಿದ್ದರು. ಆ ಕಟ್ಟಡದ ಕಿಟಕಿ ಒಡೆದು ವಾಯುಸೇನಾ ಅಧಿಕಾರಿಗಳನ್ನು ರಕ್ಷಿಸಲಾಗಿತ್ತು. ಆಮೇಲೆ ಉಗ್ರರನ್ನು ಹತ್ಯೆಗೈಯ್ಯಲು ಸ್ಫೋಟಕಗಳನ್ನು ಬಳಸಲಾಯಿತು. ಭಾರೀ ಪ್ರಮಾಣದ ಬಾಂಬ್‌ಗಳು ಉಗ್ರರ ಕೈಯಲ್ಲಿದ್ದವು. ರೇಡಿಯೋ ಸೆಟ್ ಮತ್ತು ಜೈಷೆ ಮಹಮ್ಮದ್‌ನ ಕರಪತ್ರವೂ ಈ ಉಗ್ರರ ಕೈಯಿಂದ ಸಿಕ್ಕಿದೆ ಎಂದು ವೆಸ್ಟರ್ನ್ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆ. ಜನರಲ್ ಕೆಜೆ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸಿದ್ದು ಯಾಕೆ?
ಪಠಾಣ್‌ಕೋಟ್ ವಾಯುನೆಲೆಯಲ್ಲಿರುವವರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬ ಕಾರಣದಿಂದಲೇ ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜನೆ ಮಾಡಲಾಗಿತ್ತು. ಪಂಜಾಬ್‌ನ ಬಳಿಯಲ್ಲಿಯೇ ಕರಸೇನಾ ಕಮಾಂಡೋಗಳಿರುವಾಗ ಎನ್‌ಎಸ್‌ಜಿಗಳು ಬರುವವರೆಗೆ ಕಾದು ನಿಂತಿದ್ದು ಯಾಕೆ? ಎಂಬ ಪ್ರಶ್ನೆಯೆದ್ದಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಒತ್ತೆಯಾಳುಗಳನ್ನು ರಕ್ಷಿಸಲು ವಿಶೇಷ ಪರಿಶೀಲನೆ ಹೊಂದಿದವರು ಎನ್‌ಎಸ್‌ಜಿ ಕಮಾಂಡೋಗಳು. ವಾಯುಸೇನೆ ಅಧಿಕಾರಿಗಳ ಕುಟುಂಬಗಳು ಮತ್ತು ನಾಲ್ಕು ವಿದೇಶ ರಾಷ್ಟ್ರಗಳಿಂದ ಬಂದ 23 ತರಬೇತುದಾರರು ದಾಳಿ ನಡೆಯುವ ವೇಳೆ ಅಲ್ಲಿದ್ದರು. ಅಫ್ಘಾನಿಸ್ತಾನ್, ನೈಜಿರಿಯಾ, ಶ್ರೀಲಂಕಾ, ಮ್ಯಾನ್‌ಮಾರ್ ಮೊದಲಾದ ರಾಷ್ಟ್ರಗಳಿಂದ ಬಂದ ತರಬೇತುದಾರರಾಗಿದ್ದರು. ಎಲ್ಲರ ಹಿತ ದೃಷ್ಟಿಯಿಂದ ಎನ್‌ಎಸ್‌ಜಿ ಕಮಾಂಡೋಗಳನ್ನು ಕರೆಯಲಾಯಿತು ಎಂದು ಸಿಂಗ್ ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಪ್ರಧಾನ ಪಾತ್ರವಹಿಸಿತ್ತು. ಅದೇ ವೇಳೆ ಇನ್ನೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸೇನೆ ತೀವ್ರ ನಿಗಾ ವಹಿಸಿದೆ ಎಂದು ಸಿಂಗ್ ಹೇಳಿದ್ದಾರೆ.
ಜನವರಿ 2ರಂದು ಸಂಜೆ ಆರಂಭವಾದ ಕಾರ್ಯಾಚರಣೆ ಜನವರಿ 3 ರಂದು ಮಧ್ಯಾಹ್ನ 1.30ಕ್ಕೆ ಅಂತ್ಯವಾಗಿತ್ತು. ಸೇನೆ 6 ಉಗ್ರರನ್ನು ಹತ್ಯೆಗೈದು ಆಪರೇಷನ್ ಧಂಗು ಯಶಸ್ವಿಗೊಳಿಸಿತ್ತು.
ಗರುಡ್ ಕಮಾಂಡೋ ಗುರುಸೇವಕ್ ಸಿಂಗ್ ಮಾತ್ರ ಉಗ್ರರೊಂದಿಗೆ ಹೋರಾಡಿ ಮಡಿದಿದ್ದಾರೆ. ಇನ್ನುಳಿದ 5 ಡಿಫೆನ್ಸ್ ಸೆಕ್ಯೂರಿಟಿ ಯೋಧರು ಪಾಕಶಾಲೆಯಲ್ಲಿ ಆಯುಧರಹಿತರಾಗಿದ್ದುದರಿಂದ ಉಗ್ರರ ದಾಳಿಗೆ ಬೇಗನೆ ಗುರಿಯಾದರು. ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟಗೊಂಡು ಲೆ. ಕರ್ನಲ್ ನಿರಂಜನ್ ಹುತಾತ್ಮರಾಗಿದ್ದಾರೆ.