ನವದೆಹಲಿ: ಭಾರತ ಸಹಿಷ್ಣುತಾ ದೇಶ, ಆದರೆ ಕೆಲವು ವ್ಯಕ್ತಿಗಳು ಮಾತ್ರ ಅಸಹಿಷ್ಣುಗಳಾಗಿದ್ದು, ಪ್ರತಿಯೊಂದು ದೇಶದಲ್ಲೂ ಅಸಹಿಷ್ಣುಗಳಾಗಿರುವವರು ಕೆಲವರು ಇದ್ದೇ ಇರುತ್ತಾರೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಶನಿವಾರ ಹೇಳಿದ್ದಾರೆ.
ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಸ್ಲೀಮಾ ನಸ್ರೀನಾ ಅವರು, ಭಾರತ ಸಹಿಷ್ಣುತಾ ದೇಶ ಅಂತ ನಾನು ಭಾವಿಸಿದ್ದೇನೆ. ಆದರೆ ಕೆಲವು ಅಸಹಿಷ್ಣುತಾ ವಾದಿಗಳಿದ್ದಾರೆ. ಪ್ರತಿ ಸಮಾಜದಲ್ಲೂ ಅಂಥ ಕೆಲವರು ಇದ್ದೇ ಇರುತ್ತಾರೆ ಎಂದಿದ್ದಾರೆ.
ನಾವು ಎಲ್ಲಾ ವಿಧದ ಮೂಲಭೂತವಾದವನ್ನು ಸಮಾನವಾಗಿ ಕಾಣಬೇಕು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸ್ವಾತಂತ್ರ್ಯವಿದೆ. ನಾವು ಧ್ವನಿಯೆತ್ತದಿದ್ದರೆ, ಇತರರು ನಮ್ಮ ಜತೆ ಸೇರಿ ವ್ಯವಸ್ಥೆಯ ಬದಲಾವಣೆಗೆ ಕಾರಣರಾಗುವುದಿಲ್ಲ. ನಾವು ಸ್ತ್ರೀದ್ವೇಷ ಮತ್ತು ಧಾರ್ಮಿಕ ಮೂಲಭೂತವಾದದ ವಿರುದ್ಧ ಹೋರಾಡಬೇಕು ಎಂದು ತಸ್ಲೀಮಾ ತಿಳಿಸಿದ್ದಾರೆ.
ತಸ್ಲೀಮಾ ಅವರು ತಮ್ಮ ಪುಸ್ತಕಗಳಿಂದಾಗಿ ಬಾಂಗ್ಲಾದೇಶದಲ್ಲಿ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ನಂತರ ದೇಶ ತೊರೆದ ತಸ್ಲೀಮಾ ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ.