ಪ್ರಧಾನ ಸುದ್ದಿ

ರಾಜ್ಯ ಸರ್ಕಾರಕ್ಕೇ ಸವಾಲು ಹಾಕಿದ ಅನಾಥನ ಜಾತಿ!

Mainashree
ಬೆಂಗಳೂರು: ಹೊಸ ಕನಸುಗಳನ್ನು ಹೊತ್ತ ಈ ಯುವಕನದು ಒಂದು ರೀತಿಯ ವಿಚಿತ್ರ ಸಮಸ್ಯೆ. ಬದುಕಿನ ಹಿನ್ನೆಲೆ ಭಿಕ್ಷಾಟನೆ. ಸಾಂಸ್ಕೃತಿಕ ಹಿನ್ನೆಲೆ ಪರಿಶಿಷ್ಟ ಜಾತಿ. ಅಮ್ಮನಿದ್ದರೂ ಆಶ್ರಯವಿಲ್ಲದ ಅನಾಥ. ಇಂಥ ಸನ್ನಿವೇಶದಲ್ಲಿ ಜಾತಿ ಪ್ರಮಾಣ ಸಿಕ್ಕರೆ ಸರ್ಕಾರದ ನೆರವು, ಸೌಲಭ್ಯಗಳ ಹಾದಿ ಸುಗಮವಾಗುತ್ತದೆ. ಆದರೆ, ಜಾತಿ ಪ್ರಮಾಣ ಪತ್ರ ನೀಡಲು ಸ್ಥಳೀಯ ಆಡಳಿತಗಳು ಸಿದ್ಧವಿಲ್ಲ. ಕಾರಣ, ಈತನ ಜಾತಿ ಯಾವುದೆಂದು ಹೇಳಲು ತಂದೆಯೂ ಇಲ್ಲ. ತಾಯಿಗೆ ಮಾತು, ಬುದ್ಧಿ ಇಲ್ಲ. ಹೀಗಾಗಿ ಮಂಡ್ಯದ ಆರ್‍ಟಿಒ ಕೊಳಗೇರಿ ನಿವಾಸಿ ರಘು ಬದುಕು ಜಾತಿ ಸಮಸ್ಯೆಗೆ ಸಿಲುಕಿದ್ದು, ಇದನ್ನು ಬಗೆಹರಿಸಿಕೊಳ್ಳಲು ಅವರು ಸೋಮವಾರ ವಿಧಾನಸೌಧದ ಮೆಟ್ಟಿಲೇರಿದ್ದರು. 
ರಘು ವಿಧಾನಸೌಧಕ್ಕೆ ಬಂದ ಮಾತ್ರಕ್ಕೆ ಸಮಸ್ಯೆ ಸುಲಭವಾಗಿ ಪರಿಹಾರವಾಗಲಿಲ್ಲ. ಏಕೆಂದರೆ, ಇವರು ಪರಿಶಿಷ್ಟರ ಕೇರಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಲ್ಲೇ ವಾಸವಿದ್ದಾರೆ ಎಂದ ಮಾತ್ರಕ್ಕೆ ಪರಿಶಿಷ್ಟ ಜಾತಿಗೆ ಸೇರಿದ್ದಾನೆ ಎಂದು ಪ್ರಮಾಣ ಪತ್ರ ನೀಡಲು ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಕಾರಣ, ಜಾತಿಯನ್ನು ಆಯಾ ವ್ಯಕ್ತಿಯ ಸಂಬಂಧಿಗಳು ದೃಢೀಕರಿಸಬೇಕು. ಅಂಥವರು ಯಾರೂ ಇಲ್ಲ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಹಸೀಲ್ದಾರ್ ಅಷ್ಟೇ ಏಕೆ? ಜಿಲ್ಲಾಧಿಕಾರಿ ಕೂಡ ಈ ಜಾತಿ ತಲೆನೋವನ್ನು ನಿವಾರಿಸಲಾಗದೆ ಕೈ ಚೆಲ್ಲಿದ್ದರು.
ಯಾರೀ ರಘು?
ರಘುವಿನ ತಾಯಿ ಅಂಧೆ ಹಾಗೂ ಮಾನಸಿಕ ಅಸ್ವಸ್ಥೆ. ಈಕೆ ಮೇಲೆ ಕಾಮಾಂಧರು ಅತ್ಯಾಚಾರವೆಸಗಿದ್ದರು. ಅವರು ಯಾರು ಎಂಬುದೂ ಆಕೆಗೆ ತಿಳಿದಿಲ್ಲ. ಈಕೆ ಮಂಡ್ಯದಲ್ಲಿ ಸ್ಲಂವೊಂದರಲ್ಲಿ ವಾಸವಾಗಿದ್ದಳು. ಈ ಅತ್ಯಾಚಾರದ ಕಾರಣದಿಂದ ರಘು ಹುಟ್ಟಿದ್ದಾರೆ. ಆದರೆ, ಇವರಿಗೆ ಈಗ ಜಾತಿ ಸಮಸ್ಯೆ ಕಾಡಿದೆ. ಎಸ್‍ಎಸ್‍ಎಲ್‍ಸಿ ಓದಿರುವ ರಘು ಈಗ ಐಟಿಐಗೆ ಸೇರಬೇಕು. ಬಡತನದಿಂದಾಗಿ ಫೀಸು, ಪುಸ್ತಕ ಖರೀದಿ ಕಷ್ಟ. ಜಾತಿ ಪ್ರಮಾಣ ಪತ್ರ ಸಿಕ್ಕರೆ ಸರ್ಕಾರದಿಂದ ರಿಯಾಯ್ತಿ ಸಿಗುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.
ನಾಳೆ ಜಾತಿ ಪ್ರಶ್ನಿಸಿದರೆ?: ಎಲ್ಲರೂ ಚರ್ಚಿಸಿದಂತೆ ಮಂಡ್ಯದ ರಘುಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದರೆ ಅದು ಪ್ರಶ್ನಾರ್ಹವಾಗುತ್ತದೆ. ಆಗ ರಘು ಅಧಿಕಾರಿಗಳ ಬಳಿ ಅಲೆಯುವ ಜತೆಗೆ ಕೋಟ್ರ್ ಗಳಿಗೂ ಅಲೆಯಬೇಕಾಗಬಹುದು. ಆದ್ದರಿಂದ ಇವರ ಸಾಂಸ್ಕೃತಿಕ ಹಿನ್ನೆಲೆಯನ್ನಾಧರಿಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಸಲಹೆ ವ್ಯಕ್ತವಾಯಿತು. ನಂತರ ಸಚಿವ ಆಂಜನೇಯ ಮಾತನಾಡಿ, ಇದು ಗಂಭೀರ ವಿಚಾರ. 
ಮಂಡ್ಯ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ದೊಡ್ಡ ಕಡತವೇ ಬಂದಿದೆ. ಇದನ್ನು ಪರಿಶೀಲಿಸಬೇಕಿದೆ. ಅವರ ಸಾಂಸ್ಕೃತಿಕ ಹಿನ್ನೆಲೆಯನ್ನು ಮೇಲ್ನೋಟಕ್ಕೆ ಗಮನಿಸಿದರೆ ಅವರಿಗೆ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಅಥವಾ ಆದಿ ದ್ರಾವಿಡ ಪ್ರಮಾಣ ಪತ್ರ ನೀಡಬಹುದು. ಆದರೂ ಈ ಬಗ್ಗೆ ಇನ್ನೂ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ರಘುವಿನ ಜಾತಿ ಪ್ರಮಾಣ ಪತ್ರ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
SCROLL FOR NEXT