ಬೆಂಗಳೂರು: ಪ್ರವಾಸೋಮದ್ಯದಲ್ಲಿ ಸುರಕ್ಷತೆ, ಭದ್ರತೆ ಮತ್ತು ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಜೆ.ಪಿ.ನಗರದಲ್ಲಿನ ಇಲಾನ್ ಕನ್ವೆಂನ್ಷನ್ ಸೆಂಟರ್‍ನಲ್ಲಿ ಶುಕ್ರವಾರ ಪ್ರಾರಂಭವಾದ ಮೂರು ದಿನಗಳ ಟ್ರಾವೆಲ್ ಅಂಡ್ ಟೂರಿಸಂ ಫೇರ್(ಟಿಟಿಎಫ್) ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ಎರಡು ವರ್ಷದಲ್ಲಿ ಸುಮಾರು ರು.200 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ಸರ್ಕಾರಕ್ಕೆ ಆದಾಯ ಹೆಚ್ಚಲಿದೆ.
ಪ್ರವಾಸೋದ್ಯಮದಿಂದ ಸದ್ಯ ಶೇ.6.5 ಮಾತ್ರ ಡಿಜಿಪಿ ಇದ್ದು ಹೆಚ್ಚಳಕ್ಕೆ ಪ್ರಯತ್ನಸಬೇಕಿದೆ ಎಂದರು. ರಾಜ್ಯದ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಿ ಮಾನದಂಡಕ್ಕೆ ರೇಟಿಂಗ್ ನೀಡುವಂತೆ ಖಾಸಗಿ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಹಬ್ಬ: ಟಿಟಿಎಫ್ ಪ್ರವಾಸೋದ್ಯಮ ಮೇಳದಲ್ಲಿ ನ್ಯೂಜಿಲ್ಯಾಂಡ್, ನೇಪಾಳ ಸೇರಿದಂತೆ ವಿವಿಧ 6 ದೇಶಗಳು ಮತ್ತು ದೇಶದ 20 ರಾಜ್ಯಗಳ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಕುರಿತ 125 ಮಳಿಗೆ ತೆರೆಯಲಾಗಿದೆ. ರಾಜ್ಯದ ವೈಶಿಷ್ಟ್ಯಗಳನ್ನು ಪರಿಚಯಿಸಲು ಟೂರ್ ಆಪರೇಟರ್ಸ್ ಪಾಲ್ಗೊಂಡಿದ್ದಾರೆ.